ಹೊಸದಿಗಂತ ವರದಿ, ಬೆಂಗಳೂರು:
ಸಿನಿಮಾಗಳಲ್ಲಿ ನಟಿ ಪಾತ್ರ ಕೊಡಿಸುವುದಾಗಿ ನಂಬಿಸಿ, ರಾಯಚೂರು ಮೂಲದ ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪಡಿ ಸಿನಿಮಾದ ಸಹ ನಟನೊಬ್ಬನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು ಮೂಲದ ೨೭ ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಅತ್ತಿಬೆಲೆಯ ನಿವಾಸಿ, ಸಹ ನಟ ಸಂತೋಷ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು.
೨೦೧೪ರಲ್ಲಿ ಸಂತ್ರಸ್ತೆ ಬೆಂಗಳೂರಿಗೆ ಬಂದು, ಜ್ಞಾನಭಾರತಿ ನಗರದಲ್ಲಿ ಪೋಷಕರೊಂದಿಗೆ ವಾಸವಾಗಿದ್ದರು. ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಈಕೆ ನಡುವೆ ೨೦೧೯ರಲ್ಲಿ ಸ್ನೇಹಿತೆ ಭೂಮಿಕಾ ಎಂಬಾಕೆ ಮೂಲಕ ಸಂತೋಷ್ ಪರಿಚಯವಾಗಿದ್ದ. ಇದೇ ವೇಳೆ ಆರೋಪಿಯು ತಾನು ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದೇನೆ. ನಿನಗೂ ಸಿನಿಮಾದಲ್ಲಿ ನಟಿಯ ಪಾತ್ರ ಕೊಡಿಸುತ್ತೇನೆ ಎಂದು ಆಕೆಯ ನಂಬರ್ ಪಡೆದುಕೊಂಡಿದ್ದ. ನಂತರ ಕರೆ ಮತ್ತು ಸಂದೇಶ ಕಳುಹಿಸುತ್ತಿದ್ದ. ಕೆಲ ದಿನಗಳ ಬಳಿಕ ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಅಲ್ಲದೇ, ನನಗೆ ಮದುವೆಯಾಗುತ್ತೇನೆ ಎಂದು ನಂಬಿಸಿ, ಇತ್ತೀಚೆಗೆ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಈ ಬಗ್ಗೆ ಅತ್ತಿಬೆಲೆಯಲ್ಲಿರುವ ಸಂತೋಷ್ ಮನೆಗೆ ಹೋಗಿ ಪ್ರಶ್ನಿಸಿದ್ದಕ್ಕೆ ನಿನ್ನ ಖಾಸಗಿ ವಿಡಿಯೋಗಳು ತನ್ನ ಬಳಿ ಇವೆ. ನಾನು ಹೇಳಿದಂತೆ ಕೇಳದಿದ್ದರೆ ನನ್ನ ಬಳಿಯಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಹಲ್ಲೆ ಮಾಡಿದ್ದಾನೆ. ನನ್ನನ್ನು ನಂಬಿಸಿ ವಂಚಿಸಿದ ಆರೋಪದಡಿ ಆರೋಪಿ ಸಂತೋಷ್ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದುಘಿ, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.