ಹೊಸದಿಗಂತ ವರದಿ, ದಾವಣಗೆರೆ:
ಮನೆಯ ಮುಂಭಾಗ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಇಬ್ಬರು ಆಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಗ್ರಾಮದ 7 ವರ್ಷದ ಬಾಲಕಿಯ ಜೊತೆ ಮನೆಯ ಪಕ್ಕದ 15 ವರ್ಷ ಹಾಗೂ 17 ವರ್ಷದ ಬಾಲಕರು ಪರಿಚಯ ಬೆಳೆಸಿಕೊಂಡಿದ್ದರು. ಭಾನುವಾರ ಸಂಜೆ ಮನೆಯ ಮುಂಭಾಗ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಮಗಳು ಕಾಣಿಸದ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ಅಕ್ಕಪಕ್ಕದ ಮನೆಗೆ ಹುಡುಕಿಕೊಂಡು ಹೋದಾಗ ವಿಷಯ ಗೊತ್ತಾಗಿದೆ. ದೌರ್ಜನ್ಯ ಎಸಗಿದ ಬಾಲಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.