ಹೊಸದಿಗಂತ ಮಡಿಕೇರಿ:
ಮಡಿಕೇರಿ ತಾಲೂಕಿನ ಲೈನ್‌ಮನೆಯೊಂದರಲ್ಲಿದ್ದ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಡಿ.ನಂದಕುಮಾರ್ (30) ಎಂಬಾತನೇ ಶಿಕ್ಷೆಗೆ ಗುರಿಯಾದವನು. ಬಾಲಕಿಯು ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಅಪರಾಧಿಯು ನೀರು ಕೇಳಿ ಕುಡಿದು, ಆಕೆಯ ಅಪ್ಪನ ಮೊಬೈಲ್ ನಂಬರ್ ಇದೆಯಾ ಎಂದು ಕೇಳಿದ್ದ. ಬಾಲಕಿಯು ತನ್ನ ಮೊಬೈಲ್‌ನಲ್ಲಿ ಅಪ್ಪನ ಮೊಬೈಲ್ ನಂಬರ್ ಹುಡುಕುತ್ತಿದ್ದಾಗ ಅಪರಾಧಿಯು ಮನೆಯೊಳಗೆ ನುಗ್ಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆತನಿಂದ ತಪ್ಪಿಸಿಕೊಂಡು ಬಾಲಕಿ ಓಡಿ ಹೋಗುವಾಗ ಬಿದ್ದು ಬಲ ಮೊಣಕೈಗೆ ಗಾಯವಾಗಿತ್ತು. 2021ರ ಆಗಸ್ಟ್ 13ರಂದು ನಡೆದ ಈ ಘಟನೆಯ ಬಗ್ಗೆ ಬಾಲಕಿಯ ತಂದೆ ಈ ಕುರಿತು ಪ್ರಕರಣ ದಾಖಲಿಸಿದ್ದರು.
ಸಬ್‌ಇನ್‌ಸ್ಪೆಕ್ಟರ್ ಕೆ.ಬಿ.ಅಚ್ಚಮ್ಮ ಅವರು ತನಿಖೆ ನಡೆಸಿ ಅಪರಾಧಿಯನ್ನು ಬಂಧಿಸಿ, ಪೋಕ್ಸೋ ಕಾಯ್ದೆ ಅಡಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಅವರು ಅಪರಾಧಿ ನಂದಕುಮಾರ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ.ದಂಡ ವಿಧಿಸಿದ್ದು, ನೊಂದ ಬಾಲಕಿಗೆ 1 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್.ರುದ್ರಪ್ರಸನ್ನ ವಾದ ಮಂಡಿಸಿದ್ದರು.