ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಂಗಿಕ ಕಿರುಕುಳದಿಂದಾಗಿ ಬೇಸತ್ತು ವಿದ್ಯಾರ್ಥಿನಿಯೊಬ್ಬಳು ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಒಡಿಶಾದ ಬಾಲಸೋರ್‌ನ ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನಲ್ಲಿ ನಡೆದಿದೆ.
20 ವರ್ಷದ ಬಿಎಡ್ ವಿದ್ಯಾರ್ಥಿನಿ, ತನ್ನ ವಿಭಾಗದ ಮುಖ್ಯಸ್ಥ ಸಮೀರ್ ಕುಮಾರ್ ಸಾಹು ಅವರು ನಿರಂತರವಾಗಿ ಲೈಂಗಿಕತೆಗಾಗಿ ಒತ್ತಡ ಹೇರುತ್ತಿದ್ದರು ಹಾಗೂ ಒಪ್ಪದಿದ್ದರೆ ಭವಿಷ್ಯ ಹಾಳು ಮಾಡುವಂತೆ ಬೆದರಿಕೆ ನೀಡುತ್ತಿದ್ದರೆಂದು ಆರೋಪಿಸಿದ್ದಾರೆ. ಜುಲೈ 1ರಂದು ಕಾಲೇಜಿನ ಆಂತರಿಕ ದೂರು ಸಮಿತಿಗೆ ಈ ವಿಷಯವನ್ನು ತಿಳಿಸಿದ್ದರೂ, ಒಂದು ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ನ್ಯಾಯ ದೊರೆಯದ ನಿರಾಶೆಯಲ್ಲಿ ಬಾಲಕಿ ಶನಿವಾರ ಪ್ರಾಂಶುಪಾಲರ ಕಚೇರಿ ಮುಂಭಾಗದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಘಟನೆಯಲ್ಲಿ ವಿದ್ಯಾರ್ಥಿನಿಯ ದೇಹ ಶೇ.95ರಷ್ಟು ಸುಟ್ಟುಹೋಗಿದೆ. ಆಕೆಯನ್ನು ರಕ್ಷಿಸಲು ಹೋಗಿ ಮತ್ತೊಬ್ಬ ವಿದ್ಯಾರ್ಥಿಗೂ ಬೆಂಕಿ ತಗುಲಿದ್ದು, ಶೇ.70 ರಷ್ಟು ಸುಟ್ಟ ಗಾಯಗಳಾಗಿದೆ. ಇಬ್ಬರನ್ನೂ ತೀವ್ರ ಸ್ಥಿತಿಯಲ್ಲಿ ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಪೊಲೀಸರು ಆರೋಪಿ ಎಚ್‌ಒಡಿ ಸಮೀರ್ ಕುಮಾರ್ ಸಾಹು ಮತ್ತು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ಪ್ರಾಂಶುಪಾಲ ದೀಲಿಪ್ ಕುಮಾರ್ ಘೋಷ್ ಅವರನ್ನು ಬಂಧಿಸಿದ್ದಾರೆ. ಒಡಿಶಾ ಉನ್ನತ ಶಿಕ್ಷಣ ಇಲಾಖೆ ಕೂಡ ತ್ವರಿತ ಪ್ರತಿಕ್ರಿಯೆ ನೀಡಿದ್ದು, ಪ್ರಾಂಶುಪಾಲನನ್ನು ಅಮಾನತುಗೊಳಿಸಿ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್ ಘೋಷಿಸಿದ್ದಾರೆ.
ವಿದ್ಯಾರ್ಥಿನಿಯ ದೂರಿನ ಬಳಿಕ ಕೂಡ ಯಾವುದೇ ಕ್ರಮ ಕೈಗೊಳ್ಳದ ಆಂತರಿಕ ಸಮಿತಿಯ ವಿರುದ್ಧ ವಿದ್ಯಾರ್ಥಿಗಳ ತಂಡವೊಂದು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ ಹೋರಾಟ ನಡೆಸಿತ್ತು.