ಹೊಸದಿಗಂತ ಡಿಜಿಟಲ್ ಡೆಸ್ಕ್:
ಸನಾತನ ಧರ್ಮ ಕುರಿತು ತಮಿಳುನಾಡು ಸಚಿವ ಸ್ಟ್ಯಾಲಿನ್ ಹೇಳಿಕೆ ಬಳಿಕ ದೇಶವ್ಯಾಪ್ತಿ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಇದೀಗ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.
ಸನಾತನ ಧರ್ಮ ಅಂದ್ರೆ ಏನು ? ಆದಿ, ಅಂತ್ಯ ಏನೂ ಇಲ್ಲದ ಶಾಶ್ವತವಾಗಿರುವ ಧರ್ಮ ಎನ್ನುವುದು ಸನಾತನದ ಅರ್ಥ. ಸನಾತನ ಧರ್ಮ ಹಾಗೂ ಹಿಂದುಧರ್ಮ ಬೇರೆಬೇರೆಯಲ್ಲ ಎರಡೂ ಒಂದೆ ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿ , ನಾನು ಇತ್ತೀಚೆಗೆ ಒಂದು ವಿಡಿಯೋ ನೋಡುತ್ತಿದ್ದೆ. ಶಾರುಖ್ ಖಾನ್ ತನ್ನ ಪುತ್ರಿಯೊಂದಿಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ನೀವೆಲ್ಲರೂ ಕೂಡ ಅದನ್ನು ನೋಡಿದ್ದೀರಿ. ಸನಾತನ ಧರ್ಮದಲ್ಲಿ ಮಾತ್ರವೇ ಇದು ಸಾಧ್ಯ, ಎಲ್ಲಾ ಧರ್ಮದವರನ್ನು ತನ್ನವರೇ ಎಂದು ಕೊಂಡು ಇದು ಹೋಗುತ್ತದೆ ಇದು ನಮ್ಮ ಮಹತ್ವ. ಆದರೆ, ನೀವು ಎಂದಾದರೂ ಮಸೀದಿಗೆ ಹಿಂದುಗಳು ಹೋಗೋದು ಸಾಧ್ಯವೇ ಅನ್ನೋದನ್ನು ನೀವು ಒಮ್ಮೆ ಯೋಚಿಸಿ ನೋಡಿ. ಮಸೀದಿಗೆ ಸರಳವಾಗಿ ಹೋಗೋಕೆ ಆಗುತ್ತಾ? ನೀವು ಹೋಗಿದ್ದೀರಾ? ಇದು ಸಾಧ್ಯವಿಲ್ಲ. ಸನಾತನ ಧರ್ಮದ ಮಹತ್ವ ಏನೆಂದರೆ, ಎಲ್ಲಾ ಧರ್ಮದವರು ಬಂದರೂ ಅವರನ್ನು ತನ್ನೊಳಗೆ ಸೇರಿಸಿಕೊಳ್ಳುವ ಶಕ್ತಿ ಸನಾತನ ಧರ್ಮಕ್ಕೆ ಇದೆ ಎಂದು ಹೇಳಿದ್ದಾರೆ.
ಇನೂ ಸನಾತನ ಧರ್ಮ ಎಂದರೆ ಹಿಂಡು ಧರ್ಮ. ಈಗ ತಾನೆ ನಾನು ದೇವಸ್ಥಾನಕ್ಕೆ ಭೇಟಿ ನೀಡಿ ಬಂದೆ. ಇಲ್ಲಿ ತಲೆತಲೆಮಾರುಗಳಿಂದ ದೇವರನ್ನು ಪೂಜೆ ಮಾಡುತ್ತಿದ್ದವರು ಇದ್ದಾರೆ. ನಾನು ಹೋಗಿ, ಎಲ್ಲರೂ ಸಮಾನ ಇವತ್ತಿನಿಂದ ನಾನು ಪೂಜೆ ಮಾಡ್ತೇನೆ ಎಂದರೆ ಅದು ಸಾಧ್ಯವಾಗೋದಿಲ್ಲ. ಅದು ಅವರ ಕೆಲಸ. ಅದೇ ರೀತಿಯಲ್ಲಿ ಇಲ್ಲಿ ಪೂಜೆ ಮಾಡುತ್ತಿರುವ ವ್ಯಕ್ತಿಗಳು ಬಂದು ನನ್ನ ಹಾಗೆ ವ್ಯವಸಾಯ ಮಾಡಲು ಸಾಧ್ಯವಿಲ್ಲ. ಅದು ಅವರ ಕೆಲಸವಲ್ಲ. ಎಲ್ಲರೂ ಸಮಾನ. ಆದರೆ, ಅವರ ಕೆಲಸ ಅವರವರೇ ಮಾಡಬೇಕು. ಯಾರೋ ಮುಟ್ಟಾಳ ಏನೋ ಹೇಳ್ತಾನೆ ಎಂದರೆ, ಸನಾತನ ಧರ್ಮ ನಿರ್ಮೂಲನೆ ಆಗೋದಿಲ್ಲ. ತಾನೊಬ್ಬ ಹೆಮ್ಮೆಯ ಕ್ರಿಶ್ಚಿಯನ್ ಎಂದು ಹೇಳಿಕೊಳ್ಳುವ ಉದಯನಿಧಿ ಸ್ಟ್ಯಾಲಿನ್‌ಗೆ ಇದು ಅರ್ಥವೂ ಆಗೋದಿಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಡಿಎಂಕೆಗೆ ಓಪನ್ ಚಾಲೆಂಜ್
ನಾನು ಇಲ್ಲಿಂದಲೇ ಡಿಎಂಕೆಗೆ ಒಂದು ಓಪನ್ ಚಾಲೆಂಜ್ ಹಾಕುತ್ತೇನೆ. ಮುಂದಿನ ಚುನಾವಣೆಯಲ್ಲಿ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಸನಾತನ ಧರ್ಮ ನಿಮೂರ್ಲನೆ ಮಾಡುತ್ತೇವೆ ಎನ್ನುವ ಅಂಶ ಸೇರಿಸಲಿ, ಅದೇ ರೀತಿ ಬಿಜೆಪಿ ಸನಾತನ ಧರ್ಮ ರಕ್ಷಣೆ ಮಾಡುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಹಾಕುತ್ತದೆ. ನಮ್ಮ ಜನ ಯಾರಿಗೆ ವೋಟ್ ಹಾಕ್ತಾರೆ ಅನ್ನೋದನ್ನು ನೋಡೋಣವೇ? ಸ್ಟ್ಯಾಲಿನ್‌ಗೆ ಇದು ನನ್ನ ಓಪನ್ ಚಾಲೆಂಜ್ ಎಂದು ಹೇಳಿದ್ದಾರೆ.