ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾರನ್ನು ಕಿತ್ತೊಗೆದ ಬಳಿಕ ನೂತನ ಅಧ್ಯಕ್ಷರಾಗಿ ನಜಮ್ ಸೇಥಿ ಆಯ್ಕೆಯಾಗಿದ್ದಾರೆ.
ಇದಾದ ಬಳಿಕ ಮಂಡಳಿಯಲ್ಲಿ ಬದಲಾವಣೆಗೆ ಮುಂದಾಗಿದ್ದು, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಹೊಸ ಜವಾಬ್ದಾರಿ ನೀಡಿದ್ದು, ಪಾಕ್ ಕ್ರಿಕೆಟ್ ಮಂಡಳಿಯ ಹೊಸ ಮುಖ್ಯ ಆಯ್ಕೆಗಾರರನ್ನಾಗಿ ಆಯ್ಕೆಯಾಗಿದ್ದಾರೆ.
ಮೊಹಮ್ಮದ್ ವಾಸಿಂ ನೇತೃತ್ವದ ಆಯ್ಕೆ ಸಮಿತಿಯನ್ನು ಒಂದು ದಿನ ಮುಂಚಿತವಾಗಿ ವಜಾಗೊಳಿಸಿದ್ದ ಸೇಥಿ, ಶನಿವಾರ ಟ್ವೀಟ್ ಮೂಲಕ ಶಾಹಿದ್ ಅಫ್ರಿದಿಯನ್ನು ಮುಖ್ಯ ಆಯ್ಕೆಗಾರನನ್ನಾಗಿ ಮಾಡುವುದಾಗಿ ಘೋಷಿಸಿದ್ದಾರೆ.
ಈ ಆಯ್ಕೆ ಸಮಿತಿಯಲ್ಲಿ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್, ಮಾಜಿ ವೇಗದ ಬೌಲರ್ ರಾವ್ ಇಫ್ತಿಕರ್ ಕೂಡ ಅಫ್ರಿದಿ ಅವರೊಂದಿಗೆ ಇರಲಿದ್ದಾರೆ. ಅದೇ ಸಮಯದಲ್ಲಿ ಹರೂನ್ ರಶೀದ್ ಅವರನ್ನು ನೂತನ ಸಂಚಾಲಕರನ್ನಾಗಿ ಮಾಡಲಾಗಿದೆ.
ಆದರೆ, ಅಫ್ರಿದಿ ನೇತೃತ್ವದ ಈ ಆಯ್ಕೆ ಸಮಿತಿಗೆ ಕೇವಲ ಒಂದು ಸರಣಿಗೆ ಮಾತ್ರ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಸಮಿತಿಯು ನ್ಯೂಜಿಲೆಂಡ್ ಪ್ರವಾಸದ ವಿರುದ್ಧ ಆಡಲಿರುವ ಸರಣಿಗೆ ತಂಡವನ್ನು ಆಯ್ಕೆ ಮಾಡುತ್ತದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದರೂ, ಏಕದಿನ ಸರಣಿಗೆ ತಂಡವನ್ನು ಇನ್ನೂ ಆಯ್ಕೆ ಮಾಡಲಾಗಿಲ್ಲ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ 10, 12 ಮತ್ತು 14 ರಂದು ಮೂರು ಏಕದಿನ ಪಂದ್ಯಗಳನ್ನು ಆಡಲಿವೆ.