ಹೊಸದಿಗಂತ ವರದಿ ಕಲಬುರಗಿ:
ರಾಜ್ಯ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದೆ. ದಿನನಿತ್ಯ ಸಾವಿರಾರು ಮಹಿಳೆಯರು ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದು, ಬಸ್‌ನಲ್ಲಿ ಜನಸಂದಣಿ ಕೂಡ ಹೆಚ್ಚುತ್ತಿದೆ. ಅದರ ಜೊತೆಗೆ ಅಲ್ಲಲ್ಲಿ ಅಚಾತುರ್ಯ ಘಟನೆಗಳು ಕೂಡ ವರದಿಯಾಗುತ್ತಿದೆ. ಅದೇ ರೀತಿಯಾಗಿ ಕಿಕ್ಕಿರಿದ ಜನಸಂದಣಿಯಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥವಾದ ಘಟನೆ ಇಂದು ನಡೆದಿದೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದ ಬಳಿ ಈ ಘಟನೆ ಜರುಗಿದ್ದು, ವಸ್ತಾರಿ ಗ್ರಾಮದ ವಿದ್ಯಾರ್ಥಿನಿ ಶರಣಮ್ಮಾಅಸ್ವಸ್ಥಳಾಗಿದ್ದಾಳೆ.
ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ಶರಣಮ್ಮಾ, ವಸ್ತಾರಿಯಿಂದ ಜೇವರ್ಗಿಗೆ ಕಾಲೇಜಿಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಅಸ್ವಸ್ಥಳಾಗಿದ್ದಾಳೆ.
ವಿದ್ಯಾರ್ಥಿನಿ ಅಸ್ವಸ್ಥಳಾದ ಪರಿಣಾಮ ಸಾಕಷ್ಟು ಪರದಾಟ ಎದುರಾಗಿದ್ದು,ಕೂಡಲೇ ಹೆಚ್ಚಿನ ಬಸ್ ಸಂಚಾರ ಮಾಡಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.