ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಚಿತ ಬಸ್ ಒದಗಿಸುವ ಶಕ್ತಿ ಯೋಜನೆ ಆರಂಭದ ಬಳಿಕ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಸಾರಿಗೆ ಬಸ್‌ಗಳು ಜನದಟ್ಟಣೆಯೊಂದಿಗೆ ಓಡಾಡುತ್ತಿವೆ. ಇದರಿಂದ ಹಳೆಯ ಬಸ್‌ಗಳ ಮೇಲೆ ಹೊರೆ ಹೆಚ್ಚಾಗಿದೆ.
ಯೋಜನೆಯಿಂದಾಗಿ ಪ್ರತಿದಿನ 25 ಲಕ್ಷ ಹೆಚ್ಚುವರಿ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ವಾರ್ಷಿಕವಾಗಿ 900 ಕೋಟಿಗೂ ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಸಾರಿಗೆ ಇಲಾಖೆ ಇರುವ ವ್ಯವಸ್ಥೆಯಲ್ಲೇ ಪರಿಸ್ಥಿತಿ ನಿಭಾಯಿಸುತ್ತಿದೆ.
ಪ್ರಸ್ತುತ 26,000 ಬಸ್ ಗಳಲು ಓಡಾಡುತ್ತಿವೆ. ಪ್ರತಿವರ್ಷ ಶೇ.10ರಷ್ಟು ಬಸ್ ಗಳನ್ನು ಬದಲಾಯಿಸಬೇಕು. ಇದಲ್ಲದೆ, ಹಿಂದಿನ ಬಿಜೆಪಿ ಸರ್ಕಾರದ ಮೂರು ವರ್ಷ ಮತ್ತು ಹತ್ತು ತಿಂಗಳ ಅವಧಿಯಲ್ಲಿ, ಯಾವುದೇ ಹೊಸ ಬಸ್‌ಗಳನ್ನು ಖರೀದಿಸಿಲ್ಲ. ಇದರ ಪರಿಣಾಮ ಬಸ್ ಸಂಖ್ಯೆ ಇದೀಗ 21,000ಕ್ಕೆ ಇಳಿದಿದೆ. ಬಸ್ ಸಮಸ್ಯೆ ನಿವಾರಣೆಗೆ ಬಾಡಿಗೆ ಬಸ್ ನೆರವು ಪಡೆಯಲು ಚಿಂತನೆ ನಡೆಸಿದ್ದು, ಇದಕ್ಕೆ ರಾಮಲಿಂಗಾ ರೆಡ್ಡಿಯವರು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.
ಬಾಡಿಗೆ ಬದಲು ಹೊಸ ಬಸ್ ಗಳ ಖರೀದಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆಂದು ವರದಿಗಳು ತಿಳಿಸಿವೆ. ಬಜೆಟ್ ನಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದ್ದು, 4,000 ಹೊಸ ಬಸ್ ಖರೀದಿ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.