ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. 35ಕ್ಕೆ5 ವಿಕೆಟ್ ಕಳೆದುಕೊಂಡು ಒಂದು ಹಂತದಲ್ಲಿ 100 ತಲುಪುವುದು ಕಷ್ಟ ಎನ್ನುವಂತಿದ್ದ ಬಾಂಗ್ಲಾದೇಶ ತಂಡ ತೌಹಿದ್ ಹೃದೋಯ್ ಹಾಗೂ ಜಾಕರ್ ಅಲಿ ಅರ್ದಶತಕಗಳ ನೆರವಿನಿಂದ 200ರ ಗಡಿದಾಟಿ ಭಾರತಕ್ಕೆ ಸವಾಲೊಡ್ಡುವ ಮೊತ್ತ ದಾಖಲಿಸಿತು. ಒಟ್ಟಾರೆ 49.4 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 228ರನ್ಗಳಿಸಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲ ಓವರ್ನಲ್ಲಿ ಸೌಮ್ಯ ಸರ್ಕಾರ (0), 2ನೇ ಓವರ್ನಲ್ಲಿ ನಾಯಕ ನಜ್ಮುಲ್ ಹುಸೇನ್ ಶಾಂತೋ(0) ವಿಕೆಟ್ ಕಳೆದುಕೊಂಡಿತು. ನಂತರ ಬಂದ ಮೆಹಿದಿ ಹಸನ್ ಮಿರಾಜ್ 5 ರನ್ಗಳಿಗೆ ಶಮಿಗೆ 2ನೇ ಬಲಿಯಾದರು. 25 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 25 ರನ್ಗಳಿಸಿದ್ದ ತಾಂಜೀದ್ ಹಸನ್ ಹಾಗೂ ಮುಶ್ಫೀಕರ್ ರಹೀಮ್ (0) ಅಕ್ಷರ್ ಪಟೇಲ್ ಎಸೆತ 9ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು. 35 ರನ್ಗಳಿಸುವಷ್ಟರಲ್ಲಿ ಬಾಂಗ್ಲಾದೇಸ ತನ್ನ ಅರ್ಧ ಬ್ಯಾಟರ್ಗಳನ್ನ ಕಳೆದುಕೊಂಡಿತ್ತು.
100 ರನ್ಗಳಿಸುವುದು ಅಸಾಧ್ಯ ಎನ್ನುವ ಸ್ಥಿತಿಯಲ್ಲಿದ್ದ ಬಾಂಗ್ಲಾದೇಶಕ್ಕೆ ಆದರೆ 6ನೇ ವಿಕೆಟ್ಗೆ ಒಂದಾದ ತೌಹಿದ್ ಹೃದೋಯ್ ಹಾಗೂ ಜಾಕರ್ ಅಲಿ ನೆರವಾದರು. ಈ ಜೋಡಿ ಬರೋಬ್ಬರಿ 34.1 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿ154 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಯುವ ಆಟಗಾರ ಹೃದೋಯ್ ಕೊನೆಯ ಓವರ್ವರೆಗೂ 118 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 100 ರನ್ಗಳಿಸಿ ಕೊನೆಯ ಓವರ್ನಲ್ಲಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು. ರಿಶಾದ್ ಹೊಸೇನ್ 12 ಎಸೆತಗಳಲ್ಲಿ 14ರನ್ಗಳಿಸಿದರು.
ಶಮಿ 5 ವಿಕೆಟ್ ಗೊಂಚಲು
2023ರ ವಿಶ್ವಕಪ್ ಫೈನಲ್ ಬಳಿಕ ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದ ಶಮಿ ಇಂಗ್ಲೆಂಡ್ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆದರೆ ಚಾಂಪಿಯನ್ ಟ್ರೋಫಿಯಲ್ಲಿ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದಾರೆ. 10 ಓವರ್ಗಳಲ್ಲಿ 53 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಸಾಥ್ ನೀಡಿದ ಹರ್ಷಿತ್ ರಾಣಾ 31ಕ್ಕೆ 3, ಅಕ್ಷರ್ ಪಟೇಲ್ 43ಕ್ಕೆ2 ವಿಕೆಟ್ ಪಡೆದರು.