ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಬೆನ್ನಲ್ಲೇ ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಾರೆ ಎನ್ನುವ ಉಹಾಪೋಹಗಳು ಹರಿದಾಡುತ್ತಿವೆ.
ಆದರೆ 34ರ ವಯಸ್ಸಿನ ಶಮಿ ಟೆಸ್ಟ್ ನಿವೃತ್ತಿ ಬಗೆಗಿನ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ.
ಐಪಿಎಲ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದು, ಈ ನಡುವೆ ಭಾರತ ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದೀರ್ಘವಾಧಿ ಸ್ವರೂಪಕ್ಕೆ ಹಠಾತ್ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಂಡದಲ್ಲಿ ಎರಡು ನಿರ್ಣಾಯಕ ಸ್ಥಾನಗಳು ಖಾಲಿಯಾಗಿರುವುದರಿಂದ ತಂಡದ ಆಯ್ಕೆ ತೀವ್ರ ಕೂತೂಹಲವನ್ನು ಮೂಡಿಸಿದೆ.
ಇತ್ತ ಶಮಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದರ ನಡುವೆ ಟೀಮ್ ಇಂಡಿಯಾ ವೇಗಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಟೆಸ್ಟ್ ನಿವೃತ್ತಿ ಬಗೆಗಿನ ಸುದ್ದಿಗಳನ್ನು ಕಡ್ಡಿ ಮುರಿದಂತೆ ತಳ್ಳಿ ಹಾಕಿದ್ದಾರೆ.
ತಾವು ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದೇನೆಂಬ ವರದಿಗಳ ಸ್ಕ್ರೀನ್ ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಶಮಿ, ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ.
‘ತುಂಬಾ ಒಳ್ಳೆಯದು, ಮಹಾರಾಜ್. ನಿಮ್ಮ ಕೆಲಸದ ದಿನಗಳನ್ನು ಲೆಕ್ಕ ಹಾಕಿ ಹಾಗೂ ನಿಮಗೆ ಇನ್ನೂ ಎಷ್ಟು ದಿನಗಳು ಬಾಕಿ ಇದೆ ಎಂಬುದನ್ನು ನೋಡಿ. ತಡವಾಗಿ ನೀವು ಇದನ್ನು ನೋಡುತ್ತೀರಿ. ನಿಮ್ಮಂಥ ಜನರು ಭವಿಷ್ಯವನ್ನು ಹಾಳು ಮಾಡಿದ್ದಾರೆ. ಕೆಲವೊಮ್ಮಯಾದರೂ ಒಳ್ಳೆಯದನ್ನು ಮಾತನಾಡಿ. ಈ ದಿನದ ಅತ್ಯಂತ ಕೆಟ್ಟ ಸ್ಟೋರಿ ಇದಾಗಿದೆ. ಕ್ಷಮಿಸಿ,’ ಎಂದು ಮೊಹಮ್ಮದ್ ಶಮಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
2023ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಬಳಿಕ ಮೊಹಮ್ಮದ್ ಶಮಿ ಯಾವುದೇ ಟೆಸ್ಟ್ ಪಂದ್ಯಗಳನ್ನಾಡಿಲ್ಲ. ಇದಾದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ತಂಡದಿಂದ ಹೊರಗುಳಿದಿದ್ದರು.