ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಸುರಕ್ಷತೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ದುರಂತಗಳನ್ನು ತಪ್ಪಿಸಲು ಮಾತ್ರ ಸಾಧ್ಯವಾಗುತ್ತಿಲ್ಲ. ನಟರು, ಕ್ರೀಡಾಪಟುಗಳಿಂದ ಈ ಬಗ್ಗೆ ಅಭಿಯಾನ ಕೂಡ ನಡೆಸಲಾಗಿದೆ. ಇದೀಗ ಜನಪ್ರಿಯ ಗಾಯಕ ಶಂಕರ್ ಮಹಾದೇವನ್ ಅವರು ರಸ್ತೆ ಸುರಕ್ಷತೆ ಬಗ್ಗೆ ಗೀತೆಯನ್ನು ರಚಿಸಿದ್ದಾರೆ. ಇದು ದೇಶದ 22 ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಈ ಬಗ್ಗೆ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ ನಡೆದ ಯಾತ್ರಾ ಕವಚ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಈ ಬಗ್ಗೆ ಘೋಷಿಸಿರುವ ಕೇಂದ್ರ ಸಚಿವರು, ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶಂಕರ್ ಮಹಾದೇವನ್ ಅವರು ಅದ್ಭುತ ಹಾಡನ್ನು ರಚಿಸಿದ್ದಾರೆ. ಶೀಘ್ರದಲ್ಲೇ ಈ ಹಾಡು ಬಿಡುಗಡೆಯಾಗಲಿದೆ ಎಂದರು.
ಸಾಧ್ಯವಾದಷ್ಟು ಜನರನ್ನು ತಲುಪಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಂಚಿಕೊಳ್ಳುವಂತೆಯೂ ಸಾರ್ವಜನಿಕರಿಗೆ ಕರೆ ಅವರು ನೀಡಿದರು. ಕಾರುಗಳಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಕಡ್ಡಾಯ ಧರಿಸುವಂತೆಯೂ ಗಡ್ಕರಿ ಜನರಿಗೆ ಸಲಹೆ ನೀಡಿದ್ದಾರೆ.