ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ರಾಜಕೀಯ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಯ ನಂತರ ದೇಶಾದ್ಯಂತ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ರಾಜಧಾನಿ ಢಾಕಾದಲ್ಲಿ ಶನಿವಾರ ಷರೀಫ್ ಉಸ್ಮಾನ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಧ್ಯಂತರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಮಧ್ಯಾಹ್ನ 2 ಗಂಟೆಗೆ ರಾಷ್ಟ್ರೀಯ ಸಂಸತ್ತು ಕಟ್ಟಡದ ದಕ್ಷಿಣ ಪ್ಲಾಜಾದಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆ ನಡೆಯಲಿದ್ದು, ಈ ವೇಳೆ ಸಂಸತ್ತು ಭವನ ಮತ್ತು ಸುತ್ತಮುತ್ತ ಡ್ರೋನ್ ಹಾರಾಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಭದ್ರತಾ ಕಾರಣಗಳಿಂದ ಅಂತ್ಯಕ್ರಿಯೆಗೆ ಆಗಮಿಸುವವರು ಚೀಲಗಳು ಹಾಗೂ ಭಾರವಾದ ವಸ್ತುಗಳನ್ನು ತರಬಾರದೆಂದು ಸರ್ಕಾರ ಮನವಿ ಮಾಡಿದೆ. ಕುಟುಂಬದ ಇಚ್ಛೆಯಂತೆ, ರಾಷ್ಟ್ರಕವಿ ಕಾಜಿ ನಜ್ರುಲ್ ಇಸ್ಲಾಂ ಸಮಾಧಿಯ ಸಮೀಪವೇ ಹಾದಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.
ಡಿಸೆಂಬರ್ 12ರಂದು ಮುಸುಕುಧಾರಿ ಬಂದೂಕುಧಾರಿಗಳ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಾದಿ, ಚಿಕಿತ್ಸೆಗಾಗಿ ಸಿಂಗಾಪುರದಲ್ಲಿದ್ದಾಗಲೇ ಸಾವನ್ನಪ್ಪಿದ್ದರು. ಅವರ ಪಾರ್ಥಿವ ಶರೀರ ಢಾಕಾಗೆ ತಲುಪಿದ ಬಳಿಕ, ರಾಜಧಾನಿಯಲ್ಲಿ ಹಿಂಸಾತ್ಮಕ ಘಟನೆಗಳು ವರದಿಯಾಗಿವೆ.
ಈ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸೇನೆ, ಪೊಲೀಸರು ಹಾಗೂ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ. ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್, ಹಾದಿ ಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದು, ನಾಗರಿಕರು ಶಾಂತಿ ಮತ್ತು ಸಂಯಮ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

