ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆನಪಿದ್ಯಾ? ನೀವು ಚಿಕ್ಕವರಿದ್ದಾಗ ಮಿಂಚುಹುಳುಗಳನ್ನು ಬೆನ್ನಟ್ಟಿ ಹೋಗಿದ್ದು, ಅವುಗಳನ್ನು ತಂದು ಖಾಲಿ ಬೆಂಕಿಪೊಟ್ಟಣದ ಡಬ್ಬಿಯೊಳಕ್ಕೆ ಹಾಕಿಟ್ಟಿದ್ದು, ಕತ್ತಲಾದ ನಂತರ ಹುಳುಗಳನ್ನು ಹಾರಾಡಲು ಬಿಟ್ಟು ಲೈಟ್ ನೋಡಿ ಸಂಭ್ರಮಿಸಿದ್ದು? ಎಷ್ಟು ಸಮಯವಾಯ್ತು ಈ ಹುಳುಗಳನ್ನು ನೋಡಿ? ನಿಮ್ಮ ಮಕ್ಕಳು ಮಿಂಚುಹುಳುಗಳ ಜೊತೆ ಆಟ ಆಡಿದ್ದಾರಾ?
ಇತ್ತೀಚೆಗೆ ಮಿಂಚುಹುಳಗಳ ಸಂಖ್ಯೆ ತೀವ್ರವಾಗಿ ಕುಸಿತವಾಗಿದೆ. ಹೆಚ್ಚಾಗಿ ಪಶ್ಚಿಮ ಘಟ್ಟಗಳಲ್ಲಿ ಕಾಣಿಸುವ ಮಿಂಚುಹುಳುಗಳು ಇದೀಗ ಅಲ್ಲಿಯೂ ಕಾಣದಂತಾಗಿವೆ, ಅವುಗಳ ಸಂತತಿ ಕಡಿಮೆಯಾಗಿದೆ. ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಮತ್ತು ಪಾಲಿಸಿ ರಿಸರ್ಚ್ ಇನ್ಸಿಟ್ಯೂಟ್ ಮತ್ತು ಗಾಂಧಿ ವಿಜ್ಞಾನ ಕೇಂದ್ರದ ಸಂಶೋಧಕರು ಜೀರುಂಡೆ ಜಾತಿಗಳು ಮತ್ತು ಅವುಗಳ ಪರಿಸರ ಪ್ರಾಮುಖ್ಯತೆಯ ಅಧ್ಯಯನ ಕೈಗೊಂಡಿದ್ದಾರೆ.
ಮಿಂಚುಹುಳುಗಳ ಅವನತಿಗೆ ಪ್ರಮುಖ ಕಾರಣ ಕೃತಕ ಬೆಳಕು, ಹೌದು, ಇತ್ತೀಚೆಗೆ ಎಲ್ಲಿ ನೋಡಿದರೂ ಹೆಚ್ಚು ಕೃತಕ ಬೆಳಕಿನ ಬಳಕೆಯಾಗುತ್ತಿದೆ. ಇದರಿಂದಲೂ ಮಿಂಚುಹುಳುಗಳ ಅವನತಿಯಾಗುತ್ತಿರಬಹುದು. ಇನ್ನು ಹಳ್ಳಿಗಳಲ್ಲಿ ವಿದ್ಯುದ್ದೀಕರಣ, ಅರಣ್ಯಗಳಲ್ಲಿ ಕೃತಕ ಬೆಳಕಿನ ಬಳಕೆಯೂ ಪರಿಣಾಮ ಬೀರಿದೆ.
ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ರೆಸಾರ್ಟ್ಗಳನ್ನು ನಿರ್ಮಿಸಿ ಬಣ್ಣಬಣ್ಣದ ಬೆಳಕುಗಳನ್ನು ಅಳವಡಿಸಲಾಗಿದೆ, ಪ್ರವಾಸೋದ್ಯಮದಿಂದಲೂ ಸಮಸ್ಯೆ ಎದುರಾಗುತ್ತಿದೆ. ಕೃತಕ ಬೆಳಕಿನಿಂದಾಗಿ ಮಿಂಚುಹುಳುಗಳ ಪರಸ್ಪರ ಸಂವಹನ ನಡೆಸಲು ಹಾಗೂ ಸಂಯೋಗಕ್ಕೆ ಸಾಧ್ಯವಾಗುತ್ತಿಲ್ಲ. ಸಂತತಿ ಬೆಳೆಯದೇ ಸಮಸ್ಯೆಯಾಗುತ್ತಿದೆ.
ಹೆಚ್ಚಾಗಿ ಚಾರ್ಮಾಡಿ ಘಾಟ್, ಬ್ರಹ್ಮಗಿರಿ, ಲಕ್ಕವಳ್ಳಿ, ಚಿಕ್ಕಮಗಳೂರು ಹಾಗೂ ಕಳಸ ರಸ್ತೆಗಳಲ್ಲಿ ಬೆಳಕಿನ ಹುಳಗಳನ್ನು ಕಾಣಬಹುದಾಗಿದೆ, ಆದರೆ ಈಗ ಎಲ್ಲೆಡೆ ಅವುಗಳ ಸಂಖ್ಯೆ ಕಡಿಮೆಯಾಗಿದೆ.