August 24, 2026
Monday, August 24, 2026
spot_img

ಮೋದಿ ವಿದೇಶಾಂಗ ನೀತಿಗೆ ಶಶಿ ತರೂರ್ ಫಿದಾ: ಟ್ರಂಪ್ ಭೇಟಿ ಬೆಂಬಲಿಸಿ ಕಾಂಗ್ರೆಸ್ ಸಂಸದ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುವ ಕಾಂಗ್ರೆಸ್ ಸಂಸದ ಶಶಿ ತರೂರ್, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಪ್ರಧಾನಿ ಮೋದಿಯವರ ಭೇಟಿಯನ್ನು ತರೂರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ದೇಶದ ಹಿತವೇ ಮೊದಲು:

ವಿದೇಶಾಂಗ ನೀತಿಯ ವಿಷಯದಲ್ಲಿ ಭಾರತವು ಏಕಧ್ವನಿಯಲ್ಲಿ ಮಾತನಾಡಬೇಕು ಎಂದು ಪ್ರತಿಪಾದಿಸಿರುವ ತರೂರ್, ದೇಶದ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳ ಮುಂದೆ ರಾಜಕೀಯವನ್ನು ಬದಿಗಿಡಬೇಕು ಎಂದಿದ್ದಾರೆ. ಅತ್ಯಂತ ಅನಿರೀಕ್ಷಿತ ಸ್ವಭಾವದ ಡೊನಾಲ್ಡ್ ಟ್ರಂಪ್ ಅವರಂತಹ ನಾಯಕರೊಂದಿಗೆ ಪ್ರಧಾನಿ ಮೋದಿ ಹೊಂದಿರುವ ವೈಯಕ್ತಿಕ ಸ್ನೇಹ ಮತ್ತು ‘ಕೆಮಿಸ್ಟ್ರಿ’, ದ್ವಿಪಕ್ಷೀಯ ಮಾತುಕತೆಗಳಲ್ಲಿ ಭಾರತಕ್ಕೆ ದೊಡ್ಡ ಮೇಲುಗೈ ತಂದುಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ನಾವಿಕರ ಪರ ಮೋದಿ ಬ್ಯಾಟಿಂಗ್:

ವಿವಿಧ ದೇಶಗಳ ಧ್ವಜ ಹೊಂದಿರುವ ವಾಣಿಜ್ಯ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ನಾವಿಕರ ರಕ್ಷಣೆ ಕುರಿತು ಪ್ರಧಾನಿ ಮೋದಿ ತಳೆದಿರುವ ನಿಲುವನ್ನು ತರೂರ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. “ನಮ್ಮ ನಾವಿಕರು ಕೇವಲ ವಾಣಿಜ್ಯ ಉದ್ಯೋಗಿಗಳೇ ಹೊರತು ಯುದ್ಧದ ಹೋರಾಟಗಾರರಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಹಾಗೂ ಖಾಸಗಿಯಾಗಿಯೂ ಮೋದಿ ಅವರು ಭಾರತದ ಪರವಾಗಿ ಅತ್ಯಂತ ಗಟ್ಟಿಯಾದ ಧ್ವನಿ ಎತ್ತಿದ್ದಾರೆ, ಅವರ ಈ ನಡೆ ಸಂಪೂರ್ಣ ಸರಿಯಾಗಿದೆ” ಎಂದು ಶಶಿ ತರೂರ್ ಪ್ರಶಂಸಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !