ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಮತ್ತು ಭಯೋತ್ಪಾದನೆಯ ಕುರಿತು ಭಾರತದ ನಿಲುವನ್ನು ವಿವರಿಸಲು ವಿದೇಶಗಳಿಗೆ ಸರ್ಕಾರ ನಿಯೋಜಿಸಲಿರುವ ನಿಯೋಗಕ್ಕೆ ಕಾಂಗ್ರೆಸ್ ನೀಡಿದ್ದ ನಾಲ್ಕು ಸಂಸದರ ಹೆಸರುಗಳನ್ನು ಬಿಟ್ಟ ಮೋದಿ ಸರಕಾರ ಶಶಿ ತರೂರ್ ಹೆಸರನ್ನು ಅಂತಿಮಗೊಳಿಸಿದ್ದು, ಇದರಿಂದ ಕಾಂಗ್ರೆಸ್ ನಲ್ಲಿ ಅಸಮಾಧಾನ ಶುರುವಾಗಿದೆ.
ತಾನು ನೀಡಿರುವ ಸಂಸದರ ಪಟ್ಟಿಯನ್ನು ಬದಲಾಯಿಸುವುದಿಲ್ಲ ಎಂದು ಪ್ರತಿಪಾದಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸರ್ಕಾರದ್ದು ಅಪ್ರಾಮಾಣಿಕತೆ ಎಂದು ಹೇಳಿದ್ದಾರೆ.
ಆಪರೇಷನ್ ಸಿಂದೂರ್ ಬಗ್ಗೆ ವಿಶ್ವ ನಾಯಕರಿಗೆ ಮಾಹಿತಿ ನೀಡುವ ವಿಶ್ವ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ 7 ಸಂಸದರ ಪಟ್ಟಿಯಲ್ಲಿ ಸರ್ಕಾರ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ಹೆಸರಿಸಿದ ನಂತರ ಕಾಂಗ್ರೆಸ್ ನಿಂದ ಈ ಹೇಳಿಕೆ ಬಂದಿದೆ.
‘ನಮ್ಮ ಬಳಿ ಸಂಸದರ ಹೆಸರುಗಳನ್ನು ಕೇಳಲಾಗಿತ್ತು. ನಾವು ನೀಡಿದ್ದ ಹೆಸರುಗಳನ್ನು ಸೇರಿಸಲಾಗುವುದು ಎಂದು ನಾವು ನಿರೀಕ್ಷಿಸಿದ್ದೆವು. ಪಕ್ಷವು ನೀಡಿದ ಹೆಸರುಗಳನ್ನು ಸೇರಿಸಲಾಗುವುದು ಎಂದು ನಾವು ಆಶಿಸಿದ್ದೆವು. ಆದರೆ ಪಿಐಬಿಯ ಪತ್ರಿಕಾ ಪ್ರಕಟಣೆಯನ್ನು ನೋಡಿದಾಗ, ನಮಗೆ ಆಶ್ಚರ್ಯವಾಯಿತು. ಈಗ ಏನಾಗುತ್ತದೆ ಎಂದು ನಾನು ಹೇಳಲು ಸಾಧ್ಯವಿಲ್ಲ. ನಾಲ್ಕು ಹೆಸರುಗಳನ್ನು ಕೇಳುವುದು, ನಾಲ್ಕು ಹೆಸರುಗಳನ್ನು ನೀಡುವುದು ಮತ್ತು ಇನ್ನೊಂದು ಹೆಸರನ್ನು ಘೋಷಿಸುವುದು ಸರ್ಕಾರದ ಕಡೆಯಿಂದ ಅಪ್ರಾಮಾಣಿಕವಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ತೆಗೆದುಕೊಂಡ ನಂತರವೂ ರಿಜಿಜು ರಾಹುಲ್ ಜಿ ಮತ್ತು ಖರ್ಗೆ ಅವರೊಂದಿಗೆ ಮಾತನಾಡಿರಬಹುದು, ಆದರೆ ಈಗ ನಡೆದದ್ದು ಅಪ್ರಾಮಾಣಿಕ. ನಾವು ಈ ನಾಲ್ಕು ಹೆಸರುಗಳನ್ನು ಬದಲಾಯಿಸುವುದಿಲ್ಲ ಎಂದು ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ, ಲೋಕಸಭೆಯಲ್ಲಿ ಐಎನ್‌ಸಿ ಉಪ ನಾಯಕ ಗೌರವ್ ಗೊಗೊಯ್, ರಾಜ್ಯಸಭಾ ಸಂಸದ ಡಾ. ಸೈಯದ್ ನಾಸೀರ್ ಹುಸೇನ್ ಮತ್ತು ಲೋಕಸಭಾ ಸಂಸದ ರಾಜಾ ಬ್ರಾರ್ ಅವರ ಹೆಸರುಗಳನ್ನು ಸೂಚಿಸಿತ್ತು.
ಈ ಪೈಕಿ ರಾಜ್ಯಸಭಾ ಸಂಸದ ಡಾ. ಸೈಯದ್ ನಾಸೀರ್ ಹುಸೇನ್ ಕರ್ನಾಟಕದ ಸಂಸದರಾಗಿದ್ದು, ಇವರು ರಾಜ್ಯಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ ಇವರ ಬೆಂಬಲಿಗರು ವಿಧಾನಸೌಧದಲ್ಲೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿ ವಿವಾದ ಉಂಟಾಗಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ..