ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜೇಯ ಇಂಗ್ಲೆಂಡ್ ತಂಡದ ವಿರುದ್ಧ ಏಳು ವಿಕೆಟ್‌ಗಳ ಗೆಲುವು ಸಾಧಿಸಿದ ಟೀಂ ಇಂಡಿಯಾ ಮಹಿಳೆಯರು, ಚೊಚ್ಚಲ ಅಂಡರ್ 19 ಟಿ 20 ವಿಶ್ವಕಪ್ ಜಯಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಇದೇ ಮೊದಲ ಬಾರಿ ಪಂದ್ಯ ಆಯೋಜನೆ ಮಾಡಿದ್ದು, ಮಹಿಳೆಯರ ಅತ್ಯುತ್ತಮ ಪ್ರದರ್ಶನದಿಂದ ತಂಡಕ್ಕೆ ಭರ್ಜರಿ ಗೆಲುವು ದೊರೆತಿದೆ. ಜತೆಗೆ ಸ್ಫೋಟಕ ಬ್ಯಾಟರ್ ಶೆಫಾಲಿ ವರ್ಮಾ ಐಸಿಸಿ ಪ್ರಶಸ್ತಿ ಪಡೆದ ಭಾರತದ ಮೊದಲ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಪ್ರಶಸ್ತಿ ಮೂಲಕ ಮಹೇಂದ್ರ ಸಿಂಗ್ ಧೋನಿ, ಕಪಿಲ್ ದೇವ್ ಹಾಗೂ ವಿರಾಟ್ ಕೊಹ್ಲಿಯಂಥ ದಿಗ್ಗಜರ ಸಾಲಿಗೆ ಶೆಫಾಲಿ ಸೇರ್ಪಡೆಯಾಗಿದ್ದಾರೆ. ಧೋನಿ ನಾಯಕರಾಗಿ ಮೂರು ಬಾರಿ ಐಸಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇನ್ನು ಕೊಹ್ಲಿ ಅಂಡರ್ 19 ತಂಡದ ನಾಯಕರಾಗಿ ವಿಶ್ವಕಪ್ ಗೆದ್ದಿದ್ದಾರೆ.
ಸೌರವ್ ಗಂಗೂಲಿ, ಮೊಹಮ್ಮದ್ ಕೈಫ್, ಪೃಥ್ವಿ ಶಾ, ಉನ್ಮುಕ್ತ್ ಚಾಂದ್, ಯಶ್ ಧುಳ್ ಐಸಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವಕಪ್ ಗೆಲ್ಲಲು 69 ರನ್‌ಗಳ ಗುರಿ ಪಡೆದ ಭಾರತ ಕೇವಲ 14 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ವಿಶ್ವಕಪ್ ಮುಡಿಗೇರಿಸಿಕೊಂಡಿತು.