Tuesday, December 2, 2025

ಛಿ..ಛೀ ನಾಚಿಕೆಗೇಡು ! ಶ್ರೀಲಂಕಾಗೆ ‘ಎಕ್ಸ್‌ಪೈರಿ’ ಪರಿಹಾರ ಸಾಮಾಗ್ರಿ ಕಳಿಸಿದ ಪಾಕ್, ಬೇಕಿತ್ತಾ ಇದೆಲ್ಲಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿತ್ವಾ ಚಂಡಮಾರುತದ ಪ್ರಭಾವದಿಂದ ತತ್ತರಿಸಿರುವ ಶ್ರೀಲಂಕಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆರವು ಹರಿದುಬರುತ್ತಿರುವ ನಡುವೆಯೇ, ಪಾಕಿಸ್ತಾನ ಕಳುಹಿಸಿದ ಮಾನವೀಯ ನೆರವು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ.

ಶ್ರೀಲಂಕಾಕ್ಕೆ ತಲುಪಿದ ಪಾಕಿಸ್ತಾನದ ವೈದ್ಯಕೀಯ ಸರಬರಾಜು, ಆಹಾರ ಪ್ಯಾಕೆಟ್‌ಗಳು ಹಾಗೂ ಅಗತ್ಯ ವಸ್ತುಗಳ ಸಾಗಣೆಯಲ್ಲಿ ಅವಧಿ ಮೀರಿದ ಮತ್ತು ಬಳಸಲಾಗದ ಸಾಮಗ್ರಿಗಳು ಪತ್ತೆಯಾಗಿವೆ ಎಂಬ ಆರೋಪಗಳು ಕೇಳಿಬಂದಿವೆ. ಈ ವಿಷಯದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಗಂಭೀರ ರಾಜತಾಂತ್ರಿಕ ಮುಜುಗರ ಎದುರಾಗಿದ್ದು, ಕೊಲಂಬೊ ಆಡಳಿತ ಅಸಮಾಧಾನ ವ್ಯಕ್ತಪಡಿಸಿದೆ.

ಶ್ರೀಲಂಕಾದ ವಿಪತ್ತು ನಿರ್ವಹಣಾ ಹಾಗೂ ವಿದೇಶಾಂಗ ವಿಭಾಗಗಳು ನಡೆಸಿದ ಪರಿಶೀಲನೆಯಲ್ಲಿ ಹಲವಾರು ಪೆಟ್ಟಿಗೆಗಳಲ್ಲಿದ್ದ ವಸ್ತುಗಳು ಅವಧಿ ಮೀರಿರುವುದು ದೃಢಪಟ್ಟಿದೆ ಎನ್ನಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಯೋಗ್ಯವಲ್ಲದ ಈ ಸಹಾಯ ಸಾಮಗ್ರಿಗಳು ದೇಶದ ಆಡಳಿತ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿವೆ. ಈ ಕುರಿತು ಶ್ರೀಲಂಕಾ ಸರ್ಕಾರವು ಅಧಿಕೃತ ಹಾಗೂ ಅನೌಪಚಾರಿಕ ರಾಜತಾಂತ್ರಿಕ ಮಾರ್ಗಗಳ ಮೂಲಕ ಇಸ್ಲಾಮಾಬಾದ್‌ಗೆ ತನ್ನ ಅಸಮಾಧಾನವನ್ನು ತಿಳಿಸಿದೆ ಎನ್ನಲಾಗಿದೆ.

ಈ ಘಟನೆ ಸಾಮಾಜಿಕ ಮಾಧ್ಯಮದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಹಲವರು ಇದನ್ನು “ಮಾನವೀಯ ನೆರವಿನ ಅವಮಾನ” ಎಂದು ಟೀಕಿಸಿದ್ದಾರೆ. ಇದೇ ವೇಳೆ, ಮುಂದಿನ ದಿನಗಳಲ್ಲಿ ಹೊರದೇಶಗಳಿಂದ ಬರುವ ಎಲ್ಲಾ ಪರಿಹಾರ ಸಾಗಣೆಗಳ ಮೇಲೂ ಇನ್ನಷ್ಟು ಕಟ್ಟುನಿಟ್ಟಿನ ತಪಾಸಣೆ ನಡೆಸಲು ಶ್ರೀಲಂಕಾ ಸರ್ಕಾರ ತೀರ್ಮಾನಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!