ಹೊಸದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಯ ಪೊಲೀಸರು ಕಳೆದ 06 ತಿಂಗಳ ಅವಯಲ್ಲಿ ಬರೋಬ್ಬರಿ 4.32 ಕೋಟಿ ರೂ. ವೌಲ್ಯದ ಕಳುವಾದ ವಸ್ತುಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ. ಈ ಸ್ವತ್ತುಗಳನ್ನು ಗುರುವಾರ ಜಿಲ್ಲಾ ಪೊಲೀಸ್ ವತಿಯಿಂದ ವಾರಸುದಾರರಿಗೆ ಹಿಂದುರುಗಿಸಲಾಯಿತು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಸಾರ್ವಜನಿಕರು ತಮ್ಮ ಬೆಲೆ ಬಾಳುವ ವಸ್ತುಗಳ ಸುರಕ್ಷತೆಗೆ ಆದಷ್ಟೂ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಯಾವುದೇ ಕಳವು ಪ್ರಕರಣ ಸಂಭವಿಸಿದಾಗ ಪೊಲೀಸರ ಶ್ರಮ ಹೆಚ್ಚಿರುತ್ತದೆ. ಇಲಾಖೆ ಸಿಬ್ಬಂದಿ ಮತ್ತು ಅಕಾರಿಗಳು ಸತತ ಶ್ರಮ ಹಾಕಬೇಕಾಗುತ್ತದೆ. ಹಾಗಾಗಿ ಆದಷ್ಟೂ ಜಾಗರೂಕರಾಗಿದ್ದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ಆದ್ಯತೆ ನೀಡಬಹುದಾಗಿದೆ ಎಂದರು.
ಮನೆ ಕೀಲಿಗಳನ್ನು ಭದ್ರವಾಗಿ ಹಾಕಬೇಕು. ವಾಣಿಜ್ಯ ಉದ್ದೇಶದ ಜಾಗಗಳಲ್ಲಿ ಸಿಸಿ ಕ್ಯಾಮೆರಾ, ಆಭರಣ ಅಂಗಡಿಗಳಲ್ಲಿ ಅಲಾರಾಂ ಇತ್ಯಾದಿ ಸೌಕರ್ಯ ಕಲ್ಪಿಸಿಕೊಳ್ಳಬೇಕು. ಲಕ್ಷಾಂತರ ರೂ. ವಹಿವಾಟು ಮಾಡುವಲ್ಲಿ ಇದಕ್ಕಾಗಿ 10 ರಿಂದ 20 ಸಾವಿರ ಖರ್ಚು ಮಾಡಿದರೆ ಸುರಕ್ಷತೆ ಹೆಚ್ಚಿರುತ್ತದೆ. ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ, ನಂಬರ್ ಪ್ಲೇಟ್ ಇಲ್ಲದ ವಾಹನ, ಅಪರಿಚಿತರ ಓಡಾಟ ಕಂಡುಬಂದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡಿ ಎಂದು ಕೋರಿದರು.
ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಂ ಆಮ್ಟೆ, ಡಿವೈಎಸ್‌ಪಿ ಬಾಲರಾಜ್ ಇನ್ನಿತರರು ಹಾಜರಿದ್ದರು.