ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂದು ಗಲಾಟೆ ಗಣೇಶನ ವಿಸರ್ಜನೆ ಮಾಡಲಾಗುತ್ತಿದೆ. ಹೌದು, ಇಂದು ಐತಿಹಾಸಿಕ ಹಿಂದೂ ಮಹಾಸಭಾ ಸಂಘಟನೆಯ ಗಣಪತಿ ವಿಸರ್ಜನೆ ನಡೆಯಲಿದೆ.
ಪ್ರತೀ ವರ್ಷವೂ ಗಣಪತಿ ವಿಸರ್ಜನೆ ವೇಳೆ ಗಲಾಟೆ ನಡೆಯುವುದರಿಂದ ಹಿಂದೂಮಹಾಸಭಾ ಗಣಪತಿಯನ್ನು ಗಲಾಟೆ ಗಣೇಶ ಎಂದು ಹೇಳಲಾಗುತ್ತದೆ. ಅದ್ಧೂರಿಯಾಗಿ ನಡೆಯುವ ಗಣಪತಿ ವಿಸರ್ಜನೆಗಾಗಿ ಇಡೀ ಶಿವಮೊಗ್ಗ ಮದುಮಗಳಂತೆ ಸಜ್ಜಾಗಿದೆ.
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆ ನಗರದಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ. ಈ ಹಿಂದೆ ಹಲವಾರು ಅಹಿತಕರ ಘಟನೆಗಳು ನಡೆದಿವೆ, ದಿನಗಳಗಟ್ಟಲೆ ಕರ್ಫ್ಯೂ ಜಾರಿಮಾಡಬೇಕಾದ ಪರಿಸ್ಥಿತಿಯೂ ಎದುರಾಗಿದೆ.
ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ. ಕೋಟೆ ಭೀಮೇಶ್ವರ ದೇಗುಲದಲ್ಲಿ ಗಣಪ ಕುಳಿತಿದ್ದು, ಇಂದು ನಗರದಲ್ಲಿ ಮೆರವಣಿಗೆ ನಡೆಸಿ ನಂತರ ವಿಸರ್ಜನೆ ಮಾಡಲಾಗುತ್ತದೆ.
ವಿಸರ್ಜನೆ ವೇಳೆ ಲಕ್ಷಾಂತರ ಮಂದಿ ಕುಣಿದು ಕುಪ್ಪಳಿಸಿ ಗಣೇಶನನ್ನು ಕಳುಹಿಸಿಕೊಡುತ್ತಾರೆ. ಮೆರವಣಿಗೆ ಶಾಂತ ರೀತಿಯಲ್ಲಿ ನಡೆಯುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮನವಿ ಮಾಡಿದೆ.
ಇಡೀ ರಾಜ್ಯವೇ ಇಂದು ಶಿವಮೊಗ್ಗದತ್ತ ಎದುರು ನೋಡುತ್ತಿದ್ದು, ಜನಸಾಗರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.