ಹೊಸ ದಿಗಂತ ವರದಿ,ಅಂಕೋಲಾ:
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಭರದಿಂದ ಕಾರ್ಯಾಚರಣೆ ಸಾಗಿದ್ದರೂ ಮೃತ ಲಕ್ಷ್ಮಣ ನಾಯ್ಕ ಕುಟುಂಬದ ಜಗನ್ನಾಥ ಮತ್ತು ಕೇರಳದ ಲಾರಿ ಚಾಲಕ ಅರ್ಜುನ್ ಅವರ ಬಗ್ಗೆ ಮಾಹಿತಿ ಇಂದಿಗೂ ಸಿಕ್ಕಿಲ್ಲ.
ಕುಸಿತದ ವೇಳೆ ಬೆಂಜ್ ಲಾರಿ ಹೂತು ಹೋಗಿದ್ದು ಕೇರಳ ಕೋಝೀಕ್ಕೋಡ್ ನ ಚಾಲಕ ಅರ್ಜುನ್ ಪತ್ತೆಗಾಗಿ ಬಾಂಬ್ ನಿಷ್ಕ್ರೀಯ ಮೆಟಲ್ ಡಿಕ್ಟೇಟರ್ ಮತ್ತು ರಾಡಾರ್ ಮೂಲಕ ಪತ್ತೆ ಕಾರ್ಯ ಭರದಿಂದ ನಡೆದಿದೆ. ಆದರೂ ಈತನ ಸುಳಿವಿಲ್ಲ.
ಈತನ ಸಹೋದರರು ಮತ್ತು ಸಂಬಂಧಿಗಳು ಈಗ ಸ್ಥಳದಲ್ಲಿದ್ದು, ಅರ್ಜುನ್ ಶೋಧ ಕಾರ್ಯ ವಿಳಂಬ ಆಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ದುರ್ಘಟನೆ ನಂತರ ಎರಡು ಬಾರಿ ಮೊಬೈಲ್ ರಿಂಗಣಗುಟ್ಟಿದ್ದರಿಂದ ಈತ ಬದುಕಿದ್ದಾನೆ ಎಂಬ ಆಶಾಭಾವನೆ ಇವರದ್ದು. ಪೊಲೀಸರು ತಮ್ಮ ಮಾತಿಗೆ ಸ್ಪಂದಿಸುತ್ತಿಲ್ಲ,ತೆರವು ಕಾರ್ಯ ನಿಧಾನ ಆಗುತ್ತಿದೆ ಎಂಬ ದೂರನ್ನವರು ಮಾಡುತ್ತಿದ್ದಾರೆ.
ಜಗನ್ನಾಥ ಎಲ್ಲಿ ?
ದುರಂತದಲ್ಲಿ ಕಣ್ಮರೆಯಾದ ಕುಮಟಾ ನಿವಾಸಿ ಕೆಲವು ದಿನಗಳಿಂದ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ವಾಸವಾಗಿದ್ದ ಜಗನ್ನಾಥ ನಾಯ್ಕ ಕುರಿತು ಇದುವರೆಗೆ ಯಾವುದೇ ಮಾಹಿತಿ ದೊರಕದೇ ಅವರ ಕುಟುಂಬ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ.
ದುರ್ಘಟನೆ ನಡೆದು ಐದು ದಿನಗಳಾದರೂ ತಮ್ಮ ತಂದೆ ಕುರಿತು ಯಾವುದೇ ರೀತಿಯ ಮಾಹಿತಿ ಸಿಗದಿರುವುದು ಬಡ ಕುಟುಂಬವನ್ನು ಕಂಗೆಡೆಸಿದೆ.
ಪ್ರತಿ ದಿನ ಬೆಳಿಗ್ಗೆ ಘಟನಾ ಸ್ಥಳಕ್ಕೆ ಆಗಮಿಸಿ ಸಿಕ್ಕ ಸಿಕ್ಕ ಅಧಿಕಾರಿಗಳಲ್ಲಿ ತಮ್ಮ ತಂದೆಯನ್ನು ಹುಡುಕಿ ಕೊಡಿ ಎಂದು ಅಂಗಲಾಚುತ್ತಿದ್ದಾರೆ ಸಂಜೆ ಹತಾಶೆಯಿಂದ ಮನೆಗೆ ಮರಳುತ್ತಿದ್ದಾರೆ.
ಇನ್ನೊಬ್ಬ ಇದ್ದನೇ?
ಗೋಕರ್ಣದ ಗಂಗೆಕೊಳ್ಳದ ಲೋಕೇಶ್ ನಾಯ್ಕ ಸಹ ಶಿರೂರು ಗುಡ್ಡದ ತಪ್ಪಲಿನಲ್ಲಿನಿಂದ ಕಣ್ಮರೆಯಾಗಿದ್ದು, ಈವರೆಗೂ ಆತನ ಸುಳಿವು ಸಿಕ್ಕಿಲ್ಲ. ಶಿರೂರಿನ ಚಹದ ಅಂಗಡಿ ಮುಂದೆ ಈತ ನಿಂತಿರುವುದನ್ನು ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ಕೊನೆಯದಾಗಿ ನೋಡಿದ್ದು, ಅದಾದ ನಂತರ ಆತನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.ಲೋಕೇಶನ ತಾಯಿ ಮಾದೇವಿ ಆತನ ಫೋಟೋ ಹಿಡಿದು ತನ್ನ ಮಗನನ್ನು ಹುಡುಕಿಕೊಡಿ ಎಂದ ಅಡ್ಡಾಡುತ್ತಿದ್ದಾಳೆ.