ಹೊಸದಿಗಂತ ವರದಿ,ಅಂಕೋಲಾ :
ದೆಹಲಿ ಹಾಗೂ ಬೆಂಗಳೂರಿನಿಂದ ರಾಷ್ಟ್ರೀಯ ಡಿಟೆಕ್ಟರ್ ಏಜನ್ಸಿಯ ತಜ್ಞರು ಗುರುವಾರ ಬರಲಿದ್ದು, ಲಾರಿಯ ಇರುವಿಕೆ ಕುರಿತು ನಿಖರ ಲೋಕೇಶನ್ ನೀಡಲಿದ್ದಾರೆ. ಹೀಗಾಗಿ ನಾಳೆ ಟ್ರಕ್ ಶೋಧ ಕಾರ್ಯ ಯಶಸ್ವಿಗೊಳ್ಳಲಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಬೂಮ್ ಪೋಕ್ಲೇನ್ ಮೂಲಕ ಕಾರ್ಯಾಚರಣೆ ಸಂದರ್ಭದಲ್ಲಿ ಲಾರಿ ಇದ್ದ ಬಗ್ಗೆ ಮಾಹಿತಿ ಬಂದಾಗ ನಾವು ಗಂಗಾವಳಿ ನದಿಯಲ್ಲಿ ಬೋಟ್ ಮೂಲಕ ಹೋಗಿ ಪರಿಶೀಲಿಸಿದ್ದೇವೆ. ಮಣ್ಣು ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಲಾರಿ ಇರುವಿಕೆಯ ನಿಖರ ಸ್ಥಳ ತಿಳಿದಿಲ್ಲ. ನಾಳೆ ಟ್ರಕ್ ಪತ್ತೆ ಆದರೂ ಸಹ ಕಣ್ಮರೆ ಆಗಿರುವ ಮೂವರ ಪತ್ತೆಗೆ ಕಾರ್ಯಾಚರಣೆ ಮುಂದುವರೆಯಲಿದೆ ಎಂದರು.
ಸಂಚಾರ ನಿಷೇಧ
ಗುರುವಾರ ಕಾರ್ಯಾಚರಣೆ ನಡೆಯುವ ಪ್ರದೇಶದಲ್ಲಿ ಮೊಬೈಲ್ ಬಳಕೆಯಿಂದ ಹುಡುಕಾಟ ನಡೆಸುವ ಸಿಗ್ನಲ್ ಗಳಿಗೆ ಅಡಚಣೆಯಾಗುವ ಸಾಧ್ಯತೆಯಿರುವುದರಿಂದ , ಈ ಪ್ರದೇಶದಲ್ಲಿ ಸಾರ್ವಜನಿಕ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ತಿಳಿಸಿದ್ದಾರೆ.