March 23, 2026
Monday, March 23, 2026
spot_img

ಕೋಟೆ ನಾಡಲ್ಲಿ ಶಿವನಾಮ ಸ್ಮರಣೆ: ಮಹಾಶಿವರಾತ್ರಿಯ ಭಕ್ತಿ ಸಾಗರದಲ್ಲಿ ಮುಳುಗಿದ ಚಿತ್ರದುರ್ಗ!

ಹೊಸದಿಗಂತ ಚಿತ್ರದುರ್ಗ:

ಕೋಟೆ ನಾಡು ಚಿತ್ರದುರ್ಗದಲ್ಲಿ ಮಹಾ ಶಿವರಾತ್ರಿ ಹಬ್ಬವನ್ನು ಅತ್ಯಂತ ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಭಾನುವಾರ ಬೆಳಗಿನಿಂದಲೇ ನಗರದ ಪ್ರಮುಖ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರಗಳು ನೆರವೇರಿದವು.

ಕೆಳಗೋಟೆಯ ಬೇಡರ ಕಣ್ಣಪ್ಪ ದೇವಸ್ಥಾನದಲ್ಲಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಮತ್ತು ವೈವಿಧ್ಯಮಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಕೋಟೆ ರಸ್ತೆಯ ಪಾತಾಳೇಶ್ವರ, ಗಾರೆ ಬಾಗಿಲು ಈಶ್ವರ ದೇವಸ್ಥಾನ, ಉಚ್ಚಂಗಿಯಲ್ಲಮ್ಮ ಹಾಗೂ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇಗುಲಗಳಲ್ಲಿ ವರ್ಣರಂಜಿತ ವಿದ್ಯುತ್ ದೀಪಾಲಂಕಾರ ಭಕ್ತರ ಕಣ್ಣು ಸೆಳೆಯಿತು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಗಾಯತ್ರಿ ಭವನ್ ಸರ್ಕಲ್‌ನಿಂದ ಸರದಿ ಸಾಲಿನಲ್ಲಿ ನಿಂತು ನೀಲಕಂಠೇಶ್ವರ ಸ್ವಾಮಿಯ ದರ್ಶನ ಪಡೆದರು.

ನಗರದ ಚಿಕ್ಕಪೇಟೆಯಲ್ಲಿರುವ ವಿಶಿಷ್ಟ ನೆಲಮಟ್ಟದ ಪಾತಾಳೇಶ್ವರ ದೇವಸ್ಥಾನದಲ್ಲಿ ಭಕ್ತರ ಸಾಗರವೇ ಹರಿದುಬಂದಿತ್ತು. ಈ ದೇವಸ್ಥಾನದ ಬಾಗಿಲನ್ನು ವರ್ಷಕ್ಕೆ ಕೇವಲ ಒಂದು ಬಾರಿ (ಶಿವರಾತ್ರಿಯಂದು) ಮಾತ್ರ ತೆರೆಯುವ ಕಾರಣ, ಅಪರೂಪದ ಈ ದರ್ಶನ ಪಡೆಯಲು ಜನರು ಮುಗಿಬಿದ್ದಿದ್ದರು.

ಬುಧವಾರ ಇಡೀ ರಾತ್ರಿ ನಗರದಾದ್ಯಂತ ಜಾಗರಣೆ ಕಾರ್ಯಕ್ರಮಗಳು ನಡೆದವು. ಐತಿಹಾಸಿಕ ಕೋಟೆಯ ಮೇಲಿನ ದೇಗುಲಗಳಿಗೆ ರಾತ್ರಿಯಿಡೀ ಭಕ್ತರು ಭೇಟಿ ನೀಡುತ್ತಿದ್ದರು. ಈ ಬಾರಿ ಭಕ್ತರು ಉತ್ತರ ಪ್ರದೇಶದ ಕುಂಭಮೇಳದ ತ್ರಿವೇಣಿ ಸಂಗಮದ ತೀರ್ಥ ಬೆರೆಸಿದ ನೀರಿನಲ್ಲಿ ಸ್ನಾನ ಮಾಡಿ ಪುನೀತರಾದದ್ದು ವಿಶೇಷವಾಗಿತ್ತು. ಮನೆಯಲ್ಲಿ ಪೂಜೆ ಮುಗಿಸಿ ಕುಟುಂಬ ಸಮೇತ ದೇವಸ್ಥಾನಗಳಿಗೆ ತೆರಳಿ ಭಕ್ತರು ಹಣ್ಣು-ಕಾಯಿ ಸಮರ್ಪಿಸಿದರು.

ಸಂಜೆ ವೇಳೆ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾದಂತೆ ಗಾಂಧಿ ವೃತ್ತ ಹಾಗೂ ಸಂತೆ ಹೊಂಡದ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಕಂಡುಬಂದಿತು. ಹೂವು, ಹಣ್ಣು ಮತ್ತು ಕಬ್ಬಿನ ವ್ಯಾಪಾರ ಭರದಿಂದ ಸಾಗಿದ್ದರಿಂದ ರಸ್ತೆಗಳು ಕಿಷ್ಕಿಂದೆಯಂತಾಗಿದ್ದವು. ವಾಹನ ಸವಾರರು ಮತ್ತು ಪಾದಚಾರಿಗಳನ್ನು ನಿಯಂತ್ರಿಸಲು ಸಂಚಾರಿ ಪೊಲೀಸರು ಹರಸಾಹಸ ಪಡಬೇಕಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !