ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು,ಹೀಗಾಗಿ ಅವರ ಮನೆಗೆ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಬೆಂಗಳೂರಿನ ನೆಲಮಂಗಲ ಬಳಿಯ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ಅವರ ತೋಟದ ಮನೆಗೆ ಭೇಟಿ ನೀಡಿದ ಶಿವರಾಜ್ ಕುಮಾರ್ ದಂಪತಿ, ಲೀಲಾವತಿಯವರನ್ನು ಭೇಟಿಯಾಗಿ ಆರೋಗ್ಯಸ್ಥಿತಿ ವಿಚಾರಿಸಿದರು.ಲೀಲಾವತಿ ಪುತ್ರ ವಿನೋದ್ ರಾಜ್ ಅವರಿಗೆ ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ಲೀಲಾವತಿಯವರು ನನ್ನ ಧ್ವನಿಯನ್ನು ಗುರುತಿಸಿದರು. ಅವರ ಪ್ರೀತಿ ಮರೆಯಲು ಸಾಧ್ಯವಿಲ್ಲ. ದೇವರ ದಯೆ, ಜನರ ಪ್ರೀತಿಯಿಂದ ಅವರು ಬೇಗನೇ ಗುಣಮುಖರಾಗುತ್ತಾರೆ. ಲೀಲಾವತಿಯವರ ಹೆಸರಲ್ಲಿ ಪಶು ಆಸ್ಪತ್ರೆ ಆರಂಭವಾಗಿರುವುದು ಸಂತೋಷದ ವಿಚಾರ ಎಂದು ಹೇಳಿದರು.