ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್‌ನಿಂದ ಉಚ್ಛಾಟನೆಗೊಂಡಿದ್ದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪಕ್ಷದ ಚಿಹ್ನೆ ನೀಡಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕೃತವಾಗಿ ಬಿಜೆಪಿಗೆ ಬರಮಾಡಿಕೊಂಡರು.
ಮಾಜಿ ಸಂಸದ ಜಿ.ಮಾದೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ಬಳಿಕ ಒಂದು ವರ್ಷದಿಂದ ದೂರು ಉಳಿದಿದ್ದ ಶಿವರಾಮೇಗೌಡ ಬಿಜೆಪಿಗೆ ತನ್ನ ಬೆಂಬಲ ನೀಡುವುದಾಗಿ ಈ ಹಿಂದೆ ಘೋಷಿಸಿದ್ದರು. ಅದರಂತೆಯೇ ಇಂದು ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಕಮಲ ಪಕ್ಷಕ್ಕೆ ಸೇರ್ಪಡೆಯಾದರು.
ನಾಗಮಂಗಲ ಕ್ಷೇತ್ರದಲ್ಲಿ ಶಿವರಾಮೇಗೌಡರಿಗಿಂತ ಮೊದಲೇ ಬಿಜೆಪಿ ಸೇರ್ಪಡೆಯಾಗಿದ್ದ ಫೈಟರ್ ರವಿ ಈ ಬಾರಿ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಅವರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವ ಆರೋಪಕ್ಕೆ ಗುರಿಯಾಗಿದ್ದು, ಅವರ ಬಳಿಕ ನಾಗಮಂಗಲದಲ್ಲಿ ಸಮರ್ಥ ನಾಯಕ ಎಂದರೆ ಅದು ಶಿವರಾಮೇಗೌಡರು. ಇದೀಗ ಶಿವರಾಮೇಗೌಡ ಬಿಜೆಪಿ ಸೇರ್ಪಡೆಯಾದ್ದರಿಂದ ಬಿಜೆಪಿಗೆ ಇದೊಂದು ಪ್ಲಸ್ ಪಾಯಿಂಟ್ ಆಗಲಿದೆ.