ಅಂಕೋಲಾದ ದೇಗುಲಗಳಲ್ಲಿ ವಿಜೃಂಭಣೆಯಿಂದ ನಡೆಯಿತು ಶಿವರಾತ್ರಿ ಉತ್ಸವ

ಹೊಸದಿಗಂತ ವರದಿ, ಅಂಕೋಲಾ:

ತಾಲೂಕಿನ ವಿವಿಧ ಶಿವಾಲಯಗಳಲ್ಲಿ ಮಹಾ ಶಿವರಾತ್ರಿ ಉತ್ಸವ ಶ್ರದ್ಧೆಯಿಂದ ನಡೆಯಿತು.
ಪಟ್ಟಣದ ಕಣಕಣೇಶ್ವರ ದೇವಾಲಯದಲ್ಲಿ ನಸುಕಿನಿಂದಲೇ ಅಭಿಷೇಕ, ಪಡಿ ಸಮರ್ಪಣೆ ಮೊದಲಾದ ಪೂಜಾ ವಿಧಿ ವಿಧಾನಗಳು ನಡೆದವು.
ಶಿವನ ಸನ್ನಿಧಿಯಲ್ಲಿ ಬಿಲ್ವ ಪತ್ರೆ, ಎಕ್ಕೆಹೂವು ಸಮರ್ಪಿಸಿ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ,ಎಳೆನೀರ ಅಭಿಷೇಕ ಭಕ್ತಿ ಭಾವಗಳಿಂದ ನಡೆಸಲಾಯಿತು.
ತಾಲೂಕಿನ ತೆಂಕಣಕೇರಿಯ ಶಂಕರ ನಾರಾಯಣ ದೇವಾಲಯ, ಕೆರೆಕಟ್ಟೆ ಲಕ್ಷ್ಮೇಶ್ವರ ದೇವಾಲಯ, ಆರ್ಯಾದುರ್ಗ ಸಂಸ್ಥಾನದ ಸೋಮೇಶ್ವರ, ಅವರ್ಸಾದ ಕಾತ್ಯಾಯಿನಿ ಬಾಣೇಶ್ವರ, ಸುಂಕಸಾಳದ ಕದಂಬೇಶ್ವರ ಸೇರಿದಂತೆ ತಾಲೂಕಿನಲ್ಲಿ ಗ್ರಾಮೀಣ ಭಾಗಗಳ ಈಶ್ವರ ದೇವಾಲಯಗಳಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಕುಂಬಾರಕೇರಿಯ ಪುರಾತನ ಪ್ರಸಿದ್ಧ ಕದಂಬೇಶ್ವರ ದೇವಾಲಯದ ನೂತನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಶಿವರಾತ್ರಿ ಪ್ರಯುಕ್ತ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ದೇವಾಲಯದ ಪೂಜಾರಿ ವಿಶೇಷ ಪೂಜೆ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಪುರಾಣ ಪ್ರಸಿದ್ಧ ಗೋಕರ್ಣ ಕ್ಷೇತ್ರ ತಾಲೂಕಿಗೆ ಸಮೀಪದಲ್ಲಿ ಇರುವುದರಿಂದ ಬಹಳಷ್ಟು ಭಕ್ತರು ಗೋಕರ್ಣಕ್ಕೆ ತೆರಳಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!