ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಶಿವರಾತ್ರಿಯ ಸಮಯದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದ್ದು, ಫೆಬ್ರವರಿ 25 ರಿಂದ 27 ರವರೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಐಪಿ ದರುಶನ ಸೌಲಭ್ಯವನ್ನು ಸ್ಥಗಿತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಿಂದ ಭಕ್ತರು ಹಿಂದಿರುಗುವಾಗ ಕಾಶಿ ವಿಶ್ವನಾಥನ ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ದೇವಸ್ಥಾನದಲ್ಲಿ ಜನಸಂದಣಿಯನ್ನು ನಿರ್ವಹಿಸಲು ಕಷ್ಟಸಾಧ್ಯ.
ಜೊತೆಗೆ ಈ ವರ್ಷ ಫೆಬ್ರವರಿ 26 ರಂದು ಕುಂಭಮೇಳದೊಂದಿಗೆ ಮಹಾಶಿವರಾತ್ರಿ ಬರುತ್ತಿರುವುದರಿಂದ, ದೇಶಾದ್ಯಂತದ ಯಾತ್ರಿಕರು, ನಾಗಾ ಸಾಧುಗಳು ಸೇರಿದಂತೆ ವಿವಿಧ ಸಂತರು ಪ್ರಾರ್ಥನೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾಶಿವರಾತ್ರಿಯಂದು, ಭಕ್ತರ ಸಂಖ್ಯೆ 10 ರಿಂದ 12 ಲಕ್ಷ ತಲುಪುವ ನಿರೀಕ್ಷೆಯಿದ್ದು, ಬೃಹತ್ ಜನಸಂದಣಿಯನ್ನು ನಿರ್ವಹಿಸಲು, ದೇವಾಲಯದ ನಾಲ್ಕು ದ್ವಾರಗಳಲ್ಲಿ ಸರತಿ ಸಾಲುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವ ಭೂಷಣ್ ಮಿಶ್ರಾ ಹೇಳಿದ್ದಾರೆ.