ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗಲೇ, ಭಾರತೀಯ ಕ್ರಿಕೆಟ್ ತಂಡವು ಅನಿರೀಕ್ಷಿತ ಬೆಳವಣಿಗೆ ಎದುರಿಸಿದೆ. ತಂಡದ ಪ್ರಮುಖ ಜರ್ಸಿ ಪ್ರಾಯೋಜಕರಾಗಿದ್ದ ಡ್ರೀಮ್ 11 ಕಂಪನಿ ಪ್ರಯೋಜಕತ್ವದಿಂದ ಹಿಂದೆ ಸರಿದಿದೆ. ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಮೇಲೆ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ನಿಯಮದ ಪರಿಣಾಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಡ್ರೀಮ್ 11 ಹಿಂದೆ ಸರಿದ ಪರಿಣಾಮ, ಬಿಸಿಸಿಐ ಇದೀಗ ಹೊಸ ಪ್ರಾಯೋಜಕರನ್ನು ಹುಡುಕಬೇಕಾದ ಅಗತ್ಯ ಎದುರಾಗಿದೆ. ಸೆಪ್ಟೆಂಬರ್ 9 ರಿಂದ ಏಷ್ಯಾಕಪ್ ಆರಂಭವಾಗುತ್ತಿರುವುದರಿಂದ, ಮುಂಬರುವ ಕೆಲ ದಿನಗಳಲ್ಲಿ ತಾತ್ಕಾಲಿಕ ಒಪ್ಪಂದದ ಮೂಲಕ ಪ್ರಾಯೋಜಕರನ್ನು ಸೇರಿಸುವ ಯೋಜನೆ ಇದೆ. ನಂತರ ನಿಯಮಿತ ಹರಾಜು ಪ್ರಕ್ರಿಯೆಯ ಮೂಲಕ ದೀರ್ಘಕಾಲಿನ ಜರ್ಸಿ ಪ್ರಾಯೋಜಕರ ಆಯ್ಕೆ ನಡೆಯಲಿದೆ.
ಪೈಪೋಟಿಗೆ ಬರುತ್ತಿರುವ ದಿಗ್ಗಜ ಕಂಪನಿಗಳು
ಭಾರತೀಯ ಕ್ರಿಕೆಟ್ ತಂಡದ ಜರ್ಸಿಗೆ ಪ್ರಾಯೋಜಕರಾಗಲು ಹಲವು ಸಂಸ್ಥೆಗಳು ಆಸಕ್ತಿ ತೋರಿವೆ. ಗ್ರೋ, ಏಂಜಲ್ ಒನ್, ಝೆರೋಧ ಮುಂತಾದ ಹಣಕಾಸು ಕ್ಷೇತ್ರದ ಕಂಪನಿಗಳ ಜೊತೆಗೆ, ಟಾಟಾ ಗುಂಪು, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಗ್ರೂಪ್ ಮುಂತಾದ ದೊಡ್ಡ ಬಂಡವಾಳಗಾರರು ಕೂಡ ಸ್ಪರ್ಧೆಯಲ್ಲಿದ್ದಾರೆ. ಪ್ರಾಯೋಜಕತ್ವದಿಂದ ಕೋಟ್ಯಂತರ ಆದಾಯ ಬಿಸಿಸಿಐಗೆ ಸಿಗುವ ನಿರೀಕ್ಷೆ ಇದೆ.
ಜರ್ಸಿ ಪ್ರಾಯೋಜಕರ ಹಳೆಯ ಇತಿಹಾಸ
2001 ರಿಂದ 2013ರವರೆಗೆ ಸಹಾರಾ ಗ್ರೂಪ್ ಪ್ರಾಯೋಜಕರಾಗಿತ್ತು, ಆದರೆ ಆರ್ಥಿಕ ಅಕ್ರಮ ಪ್ರಕರಣಗಳಿಂದ ಅವರನ್ನು ತೆಗೆದುಹಾಕಲಾಯಿತು.
ನಂತರ ಸ್ಟಾರ್ ಸ್ಪೋರ್ಟ್ಸ್ (2013-2017) ಪ್ರಾಯೋಜಕರಾಗಿತ್ತು, ಆದರೆ ಸ್ಪರ್ಧಾ ಆಯೋಗದ ತನಿಖೆ ಎದುರಿಸಬೇಕಾಯಿತು.
ಒಪ್ಪೊ (2017-2020) ನಂತರ ಹಿಂತೆಗೆದುಕೊಂಡಿತು.
ಬೈಜೂಸ್ (2020-2023) ಆರ್ಥಿಕ ಸಮಸ್ಯೆಯಿಂದ ಬಿಸಿಸಿಐ ವಿರುದ್ಧ ನ್ಯಾಯಾಂಗ ಹೋರಾಟವನ್ನೇ ಕೈಗೊಂಡಿತ್ತು. ಇದೀಗ ಡ್ರೀಮ್ 11 ಕೂಡ ಹಿಂದೆ ಸರಿಯುವುದರಿಂದ ಮತ್ತೆ ಬಿಸಿಸಿಐಗೆ ಸಂಕಷ್ಟ ಎದುರಾಗಿದೆ.
ಭಾರತ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ಸಮಸ್ಯೆಗಳು ಹೊಸದಲ್ಲ. ಆದರೆ ಸರಿಯಾದ ಸಮಯದಲ್ಲಿ ಹೊಸ ಸ್ಪಾನ್ಸರ್ ದೊರೆತರೆ ಏಷ್ಯಾಕಪ್ ಅಭಿಯಾನಕ್ಕೆ ಅಡ್ಡಿಯಿಲ್ಲ. ಟೀಂ ಇಂಡಿಯಾ ಮೈದಾನದಲ್ಲಿ ಸವಾಲು ಎದುರಿಸಲು ಸಿದ್ಧವಿದ್ದರೂ, ಬಿಸಿಸಿಐಗೆ ಮೈದಾನದ ಹೊರಗಿನ ಈ ಹಣಕಾಸು ಸವಾಲೇ ಸಂಕಷ್ಟ ಮೂಡಿಸಿದೆ.