ಕಾಂಗ್ರೆಸ್ ಗೆ ಶಾಕ್: ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಲೋಕಸಭೆ ಚುನಾವಣೆ ಅಖಾಡದಲ್ಲಿರುವ ಕಾಂಗ್ರೆಸ್ ಗೆ ಶಾಕ್ ಎದುರಾಗಿದ್ದು, ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ಭಾನುವಾರ ತಿರಸ್ಕೃತಗೊಂಡಿದೆ.

ನಾಮಪತ್ರದಲ್ಲಿನ ಸಹಿಗಳು ತಮ್ಮವಲ್ಲ ಎಂದು ಮೂವರು ಸೂಚಕರು ಚುನಾವಣಾಧಿಕಾರಿಗೆ ಪ್ರಮಾಣ ಪತ್ರ ಸಲ್ಲಿಸಿದ ನಂತರ ನಾಮಪತ್ರ ತಿರಸ್ಕರಿಸಲಾಗಿದೆ.

ಜೊತೆಗೆ ಕಾಂಗ್ರೆಸ್‌ನ ಇನ್ನೊಬ್ಬ ಅಭ್ಯರ್ಥಿ ಸುರೇಶ್ ಪಡ್ಸಲ ಅವರ ನಾಮಪತ್ರ ಕೂಡ ಅಸಿಂಧುವಾಗಿದೆ.

ನಾಮಪತ್ರಗಳಲ್ಲಿನ ಸೂಚಕರ ಸಹಿಯಲ್ಲಿ ವ್ಯತ್ಯಾಸಗಳಿದ್ದವು ಮತ್ತು ಅವು ನಿಜವಲ್ಲ ಎಂದು ತಿಳಿದುಬಂದಿದ್ದರಿಂದ ಕುಂಭಾನಿ ಮತ್ತು ಪಡ್ಸಲ ಅವರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಸೌರಭ್ ಪರ್ಧಿ ತಿಳಿಸಿದ್ದಾರೆ. ಇದರಿಂದಾಗಿ ಸೂರತ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯೇ ಕಣದಲ್ಲಿ ಇಲ್ಲದಂತಾಗಿದೆ.

ಇನ್ನು ಅಸ್ಸಾಂನ ಮೀಸಲು ಕ್ಷೇತ್ರವಾದ ಕೊಕ್ರಾಝರ್ ಸಂಸದ, ಮೂರನೇ ಬಾರಿ ಆಯ್ಕೆ ಬಯಸಿದ್ದ ನಬಕುಮಾರ್ ಸರನಿಯಾ ಅವರ ನಾಮಪತ್ರ ಭಾನುವಾರ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿ ಪ್ರದೀಪ್ ಕುಮಾರ್ ದ್ವಿವೇದಿ ತಿಳಿಸಿದ್ದಾರೆ.

ಗಣ ಸುರಕ್ಷಾ ಪಕ್ಷದ (ಜಿಎಸ್‌ಪಿ) ಮುಖ್ಯಸ್ಥರಾಗಿರುವ ಸರನಿಯಾ, 2014ರಿಂದಲೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರ ಜಾತಿ ಪ್ರಮಾಣ ಪತ್ರದ ಸಮಸ್ಯೆಯಿಂದಾಗಿ ನಾಮಪತ್ರ ಅಸಿಂಧುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!