ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಸ್ಟ್ ಇಂಡೀಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಆಘಾತಕ್ಕೆ ಕಾರಣವಾಗಿದೆ. ಕೇವಲ 29ನೇ ವಯಸ್ಸಿನಲ್ಲಿ ಈ ನಿರ್ಧಾರವನ್ನು ಕೈಗೊಂಡಿರುವ ಪೂರನ್, ಈ ಘೋಷಣೆಯನ್ನು ಮಂಗಳವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ತ್ಯಜಿಸುವ ನಿರ್ಧಾರ ‘ಕಷ್ಟಕರ’ವಷ್ಟೇ ಅಲ್ಲದೆ, ತಂಡವನ್ನು ಮುನ್ನಡೆಸಿರುವ ಅನುಭವವನ್ನು “ಸೌಭಾಗ್ಯ” ಎಂದು ಬಣ್ಣಿಸಿದ ಪೂರನ್, ತಮ್ಮ ಭಾವನಾತ್ಮಕ ಸಂದೇಶದಲ್ಲಿ ಕ್ರಿಕೆಟ್ ತಮ್ಮ ಜೀವನದ ಅವಿಭಾಜ್ಯ ಭಾಗ ಎಂದು ಹೇಳಿದರು. “ಆ ಮರೂನ್ ಜೆರ್ಸಿ ಧರಿಸುವುದು, ರಾಷ್ಟ್ರಗೀತೆಗಾಗಿ ನಿಲ್ಲುವುದು ಮತ್ತು ನಾನು ಮೈದಾನಕ್ಕೆ ಕಾಲಿಡುವ ಪ್ರತಿ ಬಾರಿ ಎಲ್ಲವನ್ನೂ ನೀಡುವುದು. ಅದು ನನಗೆ ಏನನ್ನು ಅರ್ಥೈಸುತ್ತದೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಈ ಆಟ ನನ್ನ ಬದುಕಿಗೆ ಅರ್ಥ ನೀಡಿದ್ದು ಮರೆಯಲಾಗದು” ಎಂದು ಅವರು ಬರೆದಿದ್ದಾರೆ.
2016ರಲ್ಲಿ ಪಾಕಿಸ್ತಾನ ವಿರುದ್ಧ ದುಬೈನಲ್ಲಿ ಟಿ20 ಪಂದ್ಯದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ಪೂರನ್, 61 ಟಿ20 ಹಾಗೂ 106 ಏಕದಿನ ಪಂದ್ಯಗಳನ್ನು ಆಡಿದ್ದು, 4000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2022ರಲ್ಲಿ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕತ್ವ ವಹಿಸಿದ್ದರು. ಆದರೆ ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ಕಡಿಮೆ ಫಲಿತಾಂಶಗಳ ಕಾರಣ ಅವರು ನಾಯಕ ಸ್ಥಾನದಿಂದ ಹಿಂದೆ ಸರಿದರು.
ಐಪಿಎಲ್ 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಉತ್ತಮ ಆಟವನ್ನಾಡಿದ ಪೂರನ್, ಶಕ್ತಿ ಶಾಲಿ ಹಿಟ್ಟಿಂಗ್‌ನಿಂದ ಸಿಕ್ಸರ್ ಮಾಸ್ಟರ್ ಎಂಬ ಖ್ಯಾತಿ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿಯಿಂದ ವಿಶ್ರಾಂತಿ ಕೇಳಿದ ಕೆಲವೇ ದಿನಗಳಲ್ಲಿ ಈ ನಿವೃತ್ತಿಯ ನಿರ್ಧಾರ ಪ್ರಕಟವಾಗಿದೆ.
ಕ್ರಿಕೆಟ್ ಜಗತ್ತಿಗೆ ತಮ್ಮ ಸೇವೆ ನೀಡಿದ ಪೂರನ್, ಇನ್ನೊಂದು ಹಾದಿಯಲ್ಲಿ ತಮ್ಮ ಪಾತ್ರ ನಿರ್ವಹಿಸುತ್ತಾರೆಯೇ ಎಂಬ ಕುತೂಹಲ ಇದೀಗ ಶುರುವಾಗಿದೆ.