ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026 ಮಿನಿ ಹರಾಜುಗೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿಯಿರುವಾಗಲೇ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುವ ಬೆಳವಣಿಗೆ ಬೆಳಕಿಗೆ ಬಂದಿದೆ. ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ಐಪಿಎಲ್ ಸೀಸನ್‌ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿಕೊಂಡಿದ್ದಾರೆ.
ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ IPL ಮಿನಿ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸದೇ ಇರುವ ಮೂಲಕ ಅವರು ಈ ಮಹತ್ವದ ತೀರ್ಮಾನವನ್ನು ಅಧಿಕೃತಗೊಳಿಸಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಮಾತನಾಡಿರುವ ಮ್ಯಾಕ್ಸ್‌ವೆಲ್, ಐಪಿಎಲ್ ತನ್ನ ಕ್ರಿಕೆಟ್ ಬದುಕಿಗೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿ, ಈ ಲೀಗ್ ಹಾಗೂ ಭಾರತೀಯ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ನಿರ್ಧಾರ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕಳೆದ ಸೀಸನ್‌ನಲ್ಲಿ ಅವರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಕೇವಲ ಒಂಬತ್ತು ಪಂದ್ಯಗಳಲ್ಲಿ ಅಲ್ಪ ರನ್ ಗಳಿಸಿದ್ದ ಅವರು, ಗಾಯದ ಕಾರಣದಿಂದಲೇ ಮಧ್ಯದಲ್ಲೇ ಟೂರ್ನಿಯಿಂದ ಹೊರಬಂದಿದ್ದರು. ಇದೇ ಕಾರಣಕ್ಕೆ ಅವರನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ರಿಟೇನ್ ಮಾಡಿಕೊಂಡಿರಲಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ.

