ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಶ್ರೀಲಂಕಾದ ಯುವ ವೇಗಿ ಮತೀಶ ಪತಿರಾಣ ಅವರಿಗೆ ಟೂರ್ನಿಯಲ್ಲಿ ಆಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.
ಟಿ20 ವಿಶ್ವಕಪ್ ವೇಳೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ತೊಡೆಯ ಸ್ನಾಯು ಸೆಳೆತಕ್ಕೊಳಗಾದ ಪತಿರಾಣ, ನಾಲ್ಕು ಓವರ್ ಬೌಲಿಂಗ್ ಬಳಿಕ ಮೈದಾನ ತೊರೆಯಬೇಕಾಯಿತು. ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆ, ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ:
ಭಾರಿ ಮೊತ್ತಕ್ಕೆ ಅವರನ್ನು ಹರಾಜಿನಲ್ಲಿ ಪಡೆದಿದ್ದ ಕೋಲ್ಕತಾ ನೈಟ್ ರೈಡರ್ಸ್, ಅವರು ನಂತರ ತಂಡ ಸೇರುತ್ತಾರೆ ಎಂಬ ನಿರೀಕ್ಷೆಯಲ್ಲಿ ಬದಲಿ ಆಟಗಾರ ಘೋಷಿಸಿಲ್ಲ. ಆದರೆ ಗಾಯದ ಸಮಸ್ಯೆಗಳು ತಂಡಕ್ಕೆ ತಲೆನೋವಾಗಿದೆ. ಪ್ರಮುಖ ವೇಗಿ ಹರ್ಷಿತ್ ರಾಣಾ ಕೂಡ ಗಾಯದಿಂದ ಈ ಸೀಸನ್‌ಗೆ ಹೊರಬಿದ್ದಿದ್ದಾರೆ.
ಇನ್ನೊಂದೆಡೆ, ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಲವು ಕಾರಣಗಳಿಂದ ಕೈಬಿಡಲಾಗಿದೆ. ಸದ್ಯ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಮಾತ್ರ ವಿದೇಶಿ ವೇಗಿಯಾಗಿ ತಂಡದಲ್ಲಿದ್ದಾರೆ.
ಈ ಸವಾಲುಗಳ ನಡುವೆಯೇ ನಾಯಕ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಕೋಲ್ಕತಾ ತಂಡ ಮಾರ್ಚ್ 29ರಂದು ಮುಂಬೈ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.



