ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರಾವಣ ಮಾಸದಲ್ಲಿ ಸಾಲುಸಾಲು ಹಬ್ಬಗಳು ಇರುವಾಗ, ಊರಿಗೆ ಹೋಗಲು ಯೋಜನೆ ಹಾಕಿಕೊಂಡಿರುವವರಿಗೆ ಸಾರಿಗೆ ಬಸ್ ಮುಷ್ಕರ ತೀವ್ರ ಅಡಚಣೆಯಾಗಿ ಪರಿಣಮಿಸಲಿದೆ. ರಾಜ್ಯದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಿದ್ದು, ಎಲ್ಲಾ ಬಸ್ ಸೇವೆಗಳ ಸ್ಥಗಿತಗೊಳ್ಳೋದು ಖಚಿತವಾಗಿದೆ.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ನೌಕರರ ಕೇಂದ್ರ ಮತ್ತು ಉತ್ತರ ನಿಗಮದ ಸಿಬ್ಬಂದಿ ವೇತನ ಪರಿಷ್ಕರಣೆ, ಬಾಕಿ ವೇತನ, ವೈದ್ಯಕೀಯ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸದ ಹಿನ್ನೆಲೆ ಮುಷ್ಕರದ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ವರ್ಷದಿಂದಲೇ ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕಾರದೊಂದಿಗೆ ಚರ್ಚೆ ನಡೆಸುತ್ತಿದ್ದ ನೌಕರರು, ಸರಕಾರದ ನಿರ್ಲಕ್ಷ್ಯದಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅನಂತ ಸುಬ್ಬರಾವ್ ಅವರು, “ಸರ್ಕಾರ ಜುಲೈ 16ರಂದು ನೀಡಿದ ಮುಷ್ಕರ ನೋಟಿಸ್‌ಗೂ ಸ್ಪಂದಿಸಿಲ್ಲ. ಬೇಡಿಕೆ ಈಡೇರಿಕೆಗೆ ಸಾನ್ನಿಧ್ಯವಿಲ್ಲದ ಕಾರಣ, ಮುಷ್ಕರ ಅನಿವಾರ್ಯವಾಗಿದೆ,” ಎಂದು ತಿಳಿಸಿದ್ದಾರೆ. ಆಗಸ್ಟ್ 4 ರಂದು ನಿಗದಿಯಾಗಿರುವ ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಸಾರಿಗೆ ಇಲಾಖೆಯೊಂದಿಗೆ ಮತ್ತೆ ಚರ್ಚೆ ನಡೆಯಲಿದೆ. ಆದರೆ ಬೇಡಿಕೆಗಳಿಗೆ ಸ್ಪಷ್ಟತೆ ಬರದಿದ್ದರೆ, ಮುಷ್ಕರ ಅನಿವಾರ್ಯ ಎಂದು ನೌಕರರು ಎಚ್ಚರಿಕೆ ನೀಡಿದ್ದಾರೆ.
ನೌಕರರ ಪ್ರಮುಖ ಬೇಡಿಕೆಗಳಲ್ಲಿವೆ: 38 ತಿಂಗಳ ಬಾಕಿ ವೇತನ ಬಿಡುಗಡೆ, ನಗದು ರಹಿತ ವೈದ್ಯಕೀಯ ಸೌಲಭ್ಯ, ಖಾಸಗೀಕರಣ ವಿರೋಧ, ವಾಹನ ಚಾಲನೆಗೆ ಸಂಸ್ಥೆಯ ಚಾಲಕರ ನಿಯೋಜನೆ, ಮತ್ತು ಉತ್ತಮ ಕ್ಯಾಂಟೀನ್ ವ್ಯವಸ್ಥೆ. ಸದ್ಯ, ಒಂದು ಲಕ್ಷಕ್ಕೂ ಅಧಿಕ ನೌಕರರು ಮುಷ್ಕರಕ್ಕೆ ಸಜ್ಜಾಗಿದ್ದು, ಇದು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ತೀವ್ರವಾಗಿ ಬಾಧಿಸಲಿದೆ.