ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದ ಸ್ಥಾನದಿಂದ ಅನರ್ಹಗೊಂಡ ಪ್ರಜ್ವಲ್ ರೇವಣ್ಣ ಅವರ ಅಸಿಂಧು ಆದೇಶವನ್ನು ಮೇಲ್ಮನವಿಗೆ ಹೋಗುವವರೆಗೂ 30 ದಿನಗಳ ಕಾಲ ಅಮಾನತ್ತಿನಲ್ಲಿಡುವಂತೆ ಮೊರೆ ಹೋಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಮತ್ತೆ ಶಾಕ್ ನೀಡಿದೆ.
2019ರ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರು ಹಾಸನ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಕೆ ಮಾಡಲಾದ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ಪ್ರಕರಣದ ವಿಚಾರಣೆ ಮಾಡಿದ ಹೈಕೋರ್ಟ್ ಪ್ರಜ್ವಲ್ ರೇವಣ್ಣ ಸುಳ್ಳು ಮಾಹಿತಿ ಕೊಟ್ಟಿದ್ದಾರೆಂಬ ಆಧಾರದ ಮೇಲೆ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು.
ಹೈಕೋರ್ಟ್ ಹೊರಡಿಸಿದ ಆದೇಶದಿಂದ ಸಂಸದ ಸ್ಥಾನದಿಂದ ಅಸಿಂಧುಗೊಂಡ ಪ್ರಜ್ವಲ್ ರೇವಣ್ಣ ಅವರು, ಹೈಕೋರ್ಟ್ ಅಸಿಂಧು ಆದೇಶಕ್ಕೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೂ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದ್ಯಾವುದನ್ನೂ ಪರಿಗಣಿಸದೇ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.