ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಹಾಗೂ ಟಿ20 ಸರಣಿ ಜನವರಿ 11ರಿಂದ ಆರಂಭವಾಗಲಿದ್ದು, ಈ ನಡುವೆಯೇ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆ ಎದುರಾಗಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳು ನಡೆಯಲಿವೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಟಿ20 ತಂಡದ ಪ್ರಮುಖ ಆಟಗಾರ ತಿಲಕ್ ವರ್ಮಾ ಗಾಯದ ಸಮಸ್ಯೆಯಿಂದ ತಂಡಕ್ಕೆ ಲಭ್ಯರಾಗುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಜಯ ಹಝಾರೆ ಟ್ರೋಫಿ ವೇಳೆ ತೊಡೆಸಂಧು ಗಾಯಕ್ಕೊಳಗಾಗಿದ್ದ ತಿಲಕ್ ವರ್ಮಾ, ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸಲಹೆ ಮೇರೆಗೆ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ಕಾರಣದಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಅವರು ಆಡಲಾರರು. ಸಂಪೂರ್ಣ ಫಿಟ್‌ನೆಸ್ ಸಾಧಿಸಿದರೆ ಮಾತ್ರ ಉಳಿದ ಮೂರು ಟಿ20 ಪಂದ್ಯಗಳಿಗೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: Rice series 12 | ಯಾಕೋ ಸುಸ್ತು ಎನಿಸ್ತಿದ್ರೆ ಎನರ್ಜಿಗಾಗಿ ಈ ತರಕಾರಿ ಪೋರಿಡ್ಜ್ ತಿನ್ನಿ
ಇದೇ ವೇಳೆ ತಿಲಕ್ ವರ್ಮಾ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿರುವುದರಿಂದ, ಅವರ ಆರೋಗ್ಯ ಸ್ಥಿತಿ ಬಿಸಿಸಿಐಗೆ ಪ್ರಮುಖ ಚಿಂತೆಯಾಗಿದೆ. ಫೆಬ್ರವರಿ ಮೊದಲ ವಾರದೊಳಗೆ ಅವರು ಸಂಪೂರ್ಣ ಗುಣಮುಖರಾಗದಿದ್ದರೆ, ವಿಶ್ವಕಪ್‌ನಲ್ಲಿ ಅವರ ಭಾಗವಹಿಸುವಿಕೆ ಕೂಡ ಅನುಮಾನ. ಈ ಹಿನ್ನೆಲೆಯಲ್ಲಿ ಬಿಸಿಸಿಐ ವೈದ್ಯಕೀಯ ತಂಡವು ತಿಲಕ್ ವರ್ಮಾ ಅವರ ಚೇತರಿಕೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಿದೆ.

