ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೊಳ್ನಾಡು ಗ್ರಾಮದ ಹಲವೆಡೆ ಚಿರತೆಯೊಂದು ತನ್ನ ಎರಡು ಮರಿಗಳ ಸಹಿತ ಅಡ್ಡಾಡುತ್ತಿರುವುದು ನಾಗರಿಕರನ್ನು ಆತಂಕಕ್ಕೀಡುಮಾಡಿದೆ.
ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿದೆ
ಇಲ್ಲಿನ ಕೈಯ್ಯೂರು, ಖಂಡಿಗ, ನಾಡಾಜೆ ಮೊದಲಾದ ಕಡೆಗಳಲ್ಲಿ ತನ್ನ ಪುಟ್ಟ ಎರಡು ಮರಿಗಳೊಂದಿಗೆ ಆಗಾಗ ಪ್ರತ್ಯಕ್ಷ ವಾಗುವ ಚಿರತೆ ಗ್ರಾಮಸ್ಥರಿಗೆ ಹಗಲು ಹೊತ್ತು ಇಲ್ಲೆಲ್ಲಾ ಅಡ್ಡಾಡಲೂ ಭಯಪಡುವಂತೆ ಮಾಡುತ್ತಿವೆ.
ಶುಕ್ರವಾರ ಮಂಚಿ ಸಮೀಪದ ನಾಡಾಜೆ ಪರಿಸರದಲ್ಲಿ ಸಂಜೆ ವೇಳೆ ಹಠಾತ್ ಪ್ರತ್ಯಕ್ಷವಾಗಿರುವ ಚಿರತೆಗಳು ಇಲ್ಲಿನ ರಬ್ಬರ್ ತೋಟದಿಂದ ಬಂದು ರಸ್ತೆ ದಾಟಿ ಕೋಕಳ ಪರಿಸರದಲ್ಲಿ ಮರೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ಸೆರೆ ಸಿಕ್ಕಿತ್ತು
ಕಳೆದ ಸುಮಾರು ಆರು ತಿಂಗಳ ಹಿಂದೆ ಹೆಗಡೆಗುಳಿ ಎಂಬಲ್ಲಿ ಗಂಡು ಚಿರತೆಯೊಂದು ಸೆರೆಸಿಕ್ಕಿತ್ತು. ಇದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದರು. ಈ ಸಂದರ್ಭವೇ ಇಲ್ಲೊಂದು ಹೆಣ್ಣು ಚಿರತೆಯೂ ಇರಬೇಕು ಎಂಬ ಸಂಶಯ ಸ್ಥಳೀಯರನ್ನು ಕಾಡಿತ್ತು. ಈಗ ಅದಕ್ಕೆ ಪುಷ್ಟಿ ನೀಡುವಂತೆ ತನ್ನೆರಡು ಮರಿಗಳೊಂದಿಗೆ ಚಿರತೆ ಅಡಾಡುತ್ತಿದೆ. ಇವುಗಳನ್ನು ಸೆರೆ ಹಿಡಿಯಲು ಬೋನ್ ಅಳವಡಿಸಲಾಗಿದೆಯಾದರೂ ಇದುವರೆಗೂ ಇವುಗಳು ಸೆರೆ ಸಿಕ್ಕಿಲ್ಲ.
ಗ್ರಾಮಸ್ಥರಿಗೆ ರಕ್ಷಣೆ ನೀಡಿ
ಈ ಭಾಗದಲ್ಲಿ ಕಾಡು ಹಂದಿಗಳು, ಚಿರತೆ ಹಾವಳಿ ಮಿತಿ ಮೀರುತ್ತಿದ್ದು, ಆತಂಕದಲ್ಲಿಯೇ ದಿನಕಳೆಯುವಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮಂಚಿ ಆಗ್ರಹಿಸಿದ್ದಾರೆ.