ಅಬಕಾರಿ ಕೇಸ್‌ ನಲ್ಲಿ ದೆಹಲಿ ಸಿಎಂ ಗೆ ಶಾಕ್: ಇ.ಡಿ ಚಾರ್ಜ್‌ಶೀಟ್‌ನಲ್ಲಿ ಕೇಜ್ರಿವಾಲ್‌ ಆರೋಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಅಬಕಾರಿ ನೀತಿ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal)‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಜಾರಿ ನಿರ್ದೇಶನಾಲಯವು ರೋಸ್‌ ಅವೆನ್ಯೂ ಕೋರ್ಟ್‌ಗೆ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಅಬಕಾರಿ ನೀತಿ ಕೇಸ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ಆಮ್‌ ಆದ್ಮಿ ಪಕ್ಷವನ್ನು ಆರೋಪಿಗಳು ಎಂದು ಪ್ರಸ್ತಾಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಚಾರ್ಜ್‌ಶೀಟ್‌ ಸಲ್ಲಿಸಿರುವ ಇ.ಡಿ,ಮದ್ಯ ಮಾರಾಟಗಾರರರಿಗೆ ಅನುಕೂಲವಾಗಲಿ ಎಂಬ ದಿಸೆಯಲ್ಲಿ ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಸೇರಿ ಹಲವು ನಾಯಕರು ನೀತಿ ರೂಪಿಸಿದ್ದಾರೆ. ದಕ್ಷಿಣ ಭಾರತದ ಹಲವು ವ್ಯಕ್ತಿಗಳು ಇದರ ಲಾಭ ಪಡೆದಿದ್ದಾರೆ. ಲಾಭದ ಸ್ವಲ್ಪ ಮೊತ್ತವನ್ನು ಆಪ್‌ಗೆ ನೀಡಲಾಗಿದೆ. ಆ ಮೊತ್ತವನ್ನು ಗೋವಾ ಚುನಾವಣೆಗೆ ಬಳಸಲಾಗಿದೆ ಎಂದು ಇ.ಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ‌

ಮತ್ತೊಂದೆಡೆ, ಇ.ಡಿ ಬಂಧನ ಪ್ರಶ್ನಿಸಿ ಅರವಿಂದ್‌ ಕೇಜ್ರಿವಾಲ್‌ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ತೀರ್ಪನ್ನು ಕಾಯ್ದಿರಿಸಿದೆ.

ಅಬಕಾರಿ ನೀತಿ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ದೆಹಲಿ ಸರ್ಕಾರವು ನಗರದ ಪ್ರಮುಖ ಮದ್ಯದ ವ್ಯಾಪಾರವನ್ನು ಪರಿಷ್ಕರಿಸುವ ನೀತಿಯನ್ನು ರೂಪಿಸಿದ್ದು, ವ್ಯಾಪಾರಿಗಳಿಗೆ ಪರವಾನಗಿ ಶುಲ್ಕದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ಮಾಡಿತ್ತು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇದರಲ್ಲಿ ಅಕ್ರಮಗಳನ್ನು ಆರೋಪಿಸಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು. ನಂತರ ನೀತಿಯನ್ನು ರದ್ದುಗೊಳಿಸಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!