ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಪಿ ಪಾಕ್ ಗೆ ಸಾಥ್ ನೀಡಿದ್ದ ಟರ್ಕಿ ದೇಶಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಟರ್ಕಿ ವಿರುದ್ಧ ಭಾರತದಲ್ಲಿ ಆಕ್ರೋಶ ಕೇಳಿಬರುತ್ತಿದೆ. ಇದೀಗ ಹಣ್ಣಿನ ವ್ಯಾಪಾರಿಗಳು ಟರ್ಕಿಶ್ ಸರಕುಗಳನ್ನು, ಅದರಲ್ಲೂ ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಸೇಬುಗಳನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.
ಜೊತೆಗೆ ಭಾರತವು ಟರ್ಕಿಯಿಂದ ಪ್ರಮುಖವಾಗಿ ಅಮೃತಶಿಲೆ (ಮಾರ್ಬಲ್)ಯನ್ನು ಆಮದು ಮಾಡಿಕೊಳ್ಳುತ್ತದೆ. ಕೇಂದ್ರ ಸರ್ಕಾರ ಕೂಡಲೇ ಟರ್ಕಿಯ ಮಾರ್ಬಲ್ ಆಮದು ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಲಾಗಿದೆ.
ರಾಜಸ್ಥಾನದ ಉಯಪುರದ ಅಮೃತಶಿಲೆ ವ್ಯಾಪಾರಸ್ಥರು, ಟರ್ಕಿಯಿಂದ ಮಾರ್ಬಲ್‌ಗಳನ್ನು ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.’ಟರ್ಕಿ ತನ್ನ ಡ್ರೋನ್‌ಗಳನ್ನು ಪಾಕಿಸ್ತಾನಕ್ಕೆ ಒದಗಿಸುತ್ತಿರುವಾಗ, ಆ ದೇಶದೊಂದಿಗೆ ಉತ್ತಮ ವ್ಯಾಪಾರ ಸಂಬಂಧ ಹೊಂದುವುದು ಸರಿಯಲ್ಲ’ಎಂದು ಅಮೃತಶಿಲೆ ವ್ಯಾಪಾರಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಮಾತಾನಾಡಿರುವ ಉದಯಪುರ ಮಾರ್ಬಲ್ ಪ್ರೊಸೆಸರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಪಿಲ್ ಸುರಾನಾ, ‘ವ್ಯಾಪಾರ ಮತ್ತು ಉದ್ಯಮವು ರಾಷ್ಟ್ರ ಮತ್ತು ರಾಷ್ಟ್ರೀಯ ಹಿತಾಸಕ್ತಿಗಿಂತ ದೊಡ್ಡದಲ್ಲ. ಭಾರತದ ವ್ಯಾಪಾರ ಸಂಘಗಳು ಒಗ್ಗೂಡಿ ಟರ್ಕಿಯಿಂದ ಆಮದನ್ನು ನಿಲ್ಲಿಸಿದರೆ, ಅದು ರಾಷ್ಟ್ರೀಯ ಒಗ್ಗಟ್ಟಿನ ಬಲವಾದ ಸಂಕೇತವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಪ್ರತಿ ವರ್ಷ 14-18 ಲಕ್ಷ ಟನ್ ಅಮೃತಶಿಲೆಯನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ. 70ರಷ್ಟು ಅಮೃತಶಿಲೆಯನ್ನು ಟರ್ಕಿ ದೇಶವೊಂದರಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ಈ ವ್ಯಾಪಾರದ ಮೌಲ್ಯ ಸುಮಾರು 2,500 ರಿಂದ 3,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಟರ್ಕಿಶ್ ಸೇಬುಗಳ ಮಾರಾಟ ಬಂದ್:
ಭಾರತದ ಮೇಲೆ ದಾಳಿ ಮಾಡಲು ಟರ್ಕಿ ಡ್ರೋನ್‌ಗಳನ್ನು ಪಾಕಿಸ್ತಾನಕ್ಕೆ ನೀಡಿತು. ಅದಕ್ಕಾಗಿ ನಾವು ಟರ್ಕಿಶ್ ಹಣ್ಣುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಹಣ್ಣಿನ ಮಾರಾಟಗಾರ ಹೇಳಿದ್ದಾರೆ.
ಟರ್ಕಿಯಿಂದ ಭಾರತ ವಾರ್ಷಿಕವಾಗಿ 1,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಸೇಬುಗಳಂತಹ ಹಣ್ಣುಗಳ ಗಮನಾರ್ಹ ಪಾಲಿದೆ.ಇದೀಗ ಟರ್ಕಿಗೆ ಶಾಕ್ ಸಂಕಷ್ಟ ಎದುರಾಗಿದೆ.
ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸಹಾಯ ಮಾಡಲು ಟರ್ಕಿ ಭಾರತದ ಹಣ ಬಳಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸ್ಥಳೀಯ ಮಾರುಕಟ್ಟೆಗಳಲ್ಲಿ ಟರ್ಕಿಶ್ ಉತ್ಪನ್ನಗಳ ಮಾರಾಟ ನಿಲ್ಲಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.