ಪಾಕ್ ಗೆ ಸಾಥ್ ನೀಡಿದ ಟರ್ಕಿ ಗೆ ಶಾಕ್: ಟರ್ಕಿಶ್ ಏರ್‌ಲೈನ್ಸ್ ಜೊತೆಗಿನ ಗುತ್ತಿಗೆ ಕೊನೆಗೊಳಿಸಲು ಮುಂದಾದ ಇಂಡಿಗೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್ ಸಿಂದೂರ್ ಕಾರ್ಯಾಚರಣೆ ಸಮಯದಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲಿಸಿತ್ತು. ಹೀಗಾಗಿ ಕೇಂದ್ರ ಸರ್ಕಾರ ಇಂಡಿಗೋ ವಿಮಾನಯಾನ ಸಂಸ್ಥೆಗಳಿಗೆ ಟರ್ಕಿಶ್ ವಿಮಾನಯಾನ ಸಂಸ್ಥೆಗಳೊಂದಿಗಿನ ವಿಮಾನ ಗುತ್ತಿಗೆ ಒಪ್ಪಂದವನ್ನು 3 ತಿಂಗಳೊಳಗೆ ಕೊನೆಗೊಳಿಸುವಂತೆ ಆದೇಶಿಸಿದೆ.

ದೆಹಲಿ ಸೇರಿದಂತೆ ಭಾರತದ 9 ಪ್ರಮುಖ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದ ಟರ್ಕಿಶ್ ಕಂಪನಿ ‘ಸೆಲೆಬಿ ಏವಿಯೇಷನ್’ ಗೆ ನೀಡಿದ್ದ ಭದ್ರತಾ ಅನುಮತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಕೆಲವೇ ವಾರಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಟರ್ಕಿಶ್ ಏರ್‌ಲೈನ್ಸ್‌ನಿಂದ ಗುತ್ತಿಗೆ ಪಡೆದ ಎರಡು ಬೋಯಿಂಗ್ 777 ವಿಮಾನಗಳನ್ನು ನಿರ್ವಹಿಸುತ್ತಿರುವ ಇಂಡಿಗೋಗೆ ಮೇ 31ರವರೆಗೆ ಅವುಗಳನ್ನು ಬಳಸಲು ಅನುಮತಿ ನೀಡಲಾಗಿತ್ತು. ಆದರೆ, ವಿಮಾನಯಾನ ಸಂಸ್ಥೆಗಳು ನಾಗರಿಕ ವಿಮಾನಯಾನ ಸಚಿವಾಲಯದಿಂದ 6 ತಿಂಗಳ ವಿಸ್ತರಣೆಯನ್ನು ಕೋರಿದ್ದವು. ಅದಕ್ಕೆ ಬದಲಾಗಿ 3 ತಿಂಗಳ ವಿಸ್ತರಣೆ ನೀಡಲಾಗಿದೆ. ಟರ್ಕಿಶ್ ಏರ್‌ಲೈನ್ಸ್‌ನಿಂದ ರದ್ದುಗೊಳಿಸಲಾದ 2 ಬೋಯಿಂಗ್ ವಿಮಾನಗಳ ಗುತ್ತಿಗೆಗೆ ಇಂಡಿಗೋಗೆ ವಿಮಾನಯಾನ ಕಾವಲು ಸಂಸ್ಥೆ ಡಿಜಿಸಿಎ ಇಂದು ಮೂರು ತಿಂಗಳ ಅಂತಿಮ ವಿಸ್ತರಣೆಯನ್ನು ನೀಡಿದ್ದು, ಆಗಸ್ಟ್ 31ರವರೆಗೆ ಕಾರ್ಯಾಚರಣೆಗೆ ಅವಕಾಶ ನೀಡಿದೆ.

‘ಇಂಡಿಗೋ ಪ್ರಸ್ತುತ ಟರ್ಕಿಶ್ ಏರ್‌ಲೈನ್ಸ್‌ನಿಂದ ಎರಡು B777-300ER ವಿಮಾನಗಳನ್ನು ಗುತ್ತಿಗೆ ಆಧಾರದ ಮೇಲೆ ನಿರ್ವಹಿಸುತ್ತಿದೆ. ಇದಕ್ಕೆ ಮೇ 31ರವರೆಗೆ ಅನುಮತಿ ನೀಡಲಾಗಿತ್ತು. ಇಂಡಿಗೋ ಇನ್ನೂ 6 ತಿಂಗಳ ಕಾಲ ವಿಸ್ತರಣೆಗೆ ವಿನಂತಿಸಿತು. ಆದರೆ ಅದಕ್ಕೆ ಒಪ್ಪಿಗೆ ಸಿಗಲಿಲ್ಲ’ ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!