ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನವು ಸಮನ್ವಯ ಮತ್ತು ಏಕೀಕೃತ ಕಮಾಂಡ್ ಖಚಿತಪಡಿಸಿಕೊಳ್ಳಲು ಹೊಸ ‘ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದೆಯನ್ನು ರಚಿಸಲು ಸಂವಿಧಾನ ತಿದ್ದುಪಡಿಯನ್ನು ತಂದಿದೆ.
ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಪಾಕಿಸ್ತಾನ ಸೇನೆ ಸಮನ್ವಯದ ಕೊರೆಯ ಕಾರಣದಿಂದಾಗಿ ಭಾರೀ ಹೊಡೆತ ತಿಂದಿತ್ತು. ಈ ಹಿನ್ನೆಲೆಯಲ್ಲಿ ಈ ನಿರ್ಧಾರವು ಮಹತ್ವ ಪಡೆದುಕೊಂಡಿದೆ. ಇದರಿಂದಾಗಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ರಕ್ಷಣಾ ಪಡೆಗಳ ಮುಖ್ಯಸ್ಥ ಹುದ್ದಗೆ ಏರಲಿದ್ದಾರೆ.
ಪಾಕಿಸ್ತಾನದ ಸಂಸತ್ತಿನಲ್ಲಿ ಮಂಡಿಸಲಾದ 27ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಸಂವಿಧಾನಕ್ಕೆ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ. ಮಸೂದೆಯ ಅನ್ವಯ, ‘ರಕ್ಷಣಾ ಪಡೆಗಳ ಮುಖ್ಯಸ್ಥ’ ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಲಾಗುವುದು. ಈ ಹುದ್ದೆಗೆ ಸೇನಾ ಮುಖ್ಯಸ್ಥರೇ ನೇಮಕಗೊಳ್ಳಲಿದ್ದಾರೆ. ಇದರರ್ಥ ಸೇನಾ ಮುಖ್ಯಸ್ಥರು ರಕ್ಷಣಾ ಪಡೆಗಳ ಮುಖಸ್ಥರಾಗಿಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ಪ್ರಧಾನ ಮಂತ್ರಿಯವರ ಸಲಹೆಯ ಮೇರೆಗೆ ಅಧ್ಯಕ್ಷರು ಸೇನಾ ಮುಖ್ಯಸ್ಥರನ್ನು ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ನೇಮಕ ಮಾಡುತ್ತಾರೆ. ರಕ್ಷಣಾ ಪಡೆಗಳ ಮುಖ್ಯಸ್ಥರು, ಪ್ರಧಾನ ಮಂತ್ರಿಯವರೊಂದಿಗೆ ಸಮಾಲೋಚಿಸಿ, ರಾಷ್ಟ್ರೀಯ ಕಾರ್ಯತಂತ್ರ ಕಮಾಂಡ್‌ನ ಮುಖ್ಯಸ್ಥರನ್ನು ನೇಮಕ ಮಾಡುತ್ತಾರೆ. ಈ ಕಮಾಂಡ್‌ನ ಮುಖ್ಯಸ್ಥರು ಪಾಕಿಸ್ತಾನ ಸೇನೆಯಿಂದಲೇ ಇರುತ್ತಾರೆ. ಈ ಮಸೂದೆಯ ಅಂಗೀಕಾರವಾದರೆ, ಪ್ರಸ್ತುತ ಇರುವ ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರ ಹುದ್ದೆಯು ಕೊನೆಗೊಳ್ಳಲಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ತಿದ್ದುಪಡಿಗೆ ಭಾರತದೊಂದಿಗೆ ನಡೆದ ನಾಲ್ಕು ದಿನಗಳ ಸಂಘರ್ಷದ ವೇಳೆ ಆದ ಹಿನ್ನಡೆಯೇ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.

