ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಪಾನಿಪುರಿಯಲ್ಲಿ ಕಂಡುಬಂದಿರುವ ಕ್ಯಾನ್ಸರ್‌ಕಾರಕ , ಹಾನಿಕಾರಕ ರಾಸಾಯನಿಕ ವಿಷಗಳು.
ಗೋಬಿ ಮಂಚೂರಿ ಹಾಗೂ ಕಬಾಬ್ ಬಳಿಕ ಇದೀಗ ಪಾನಿಪುರಿಯಲ್ಲಿಯೂ ಕ್ಯಾನ್ಸರ್ ಕಾರಕ ಅಂಶಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಇದರ ಪರಿಶೀಲನೆಗಾಗಿ ಬೆಂಗಳೂರಿನ 49 ಪ್ರದೇಶಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಪರಿಶೀಲಿಸಿದಾಗ, ಎಲ್ಲ 19 ಕಡೆಯ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಲ್ಯಾಬ್ ಟೆಸ್ಟಿಂಗ್‌ನಲ್ಲಿ, ಪಾನಿಪೂರಿಗೆ ಬಳಸುವ ಐದು ಸಾಸ್, ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಕ್ಯಾನ್ಸರ್ ಕಾರಕಗಳು ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡಲಾಗುತ್ತದೆ.
ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಹೀಗಾಗಿ, ಇನ್ನೊಂದು ವಾರದಲ್ಲಿ ಪಾನಿಪುರಿಗೆ ಹಾಕುವ ಸಾಸ್ ಮತ್ತು ಮಿಟಾ ಬ್ಯಾನ್ ಮಾಡಲು ನಿರ್ಧರಿಸಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.
ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಮಾಹಿತಿ ನೀಡಿದ್ದು, ನಾವು ರಾಜ್ಯಾದ್ಯಂತ ಸುಮಾರು 260 ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿದ್ದೆವು. ಸಂಗ್ರಹ ಮಾಡಿದ ಮಾದರಿಗಳನ್ನು ಲ್ಯಾಬ್‌ಗಳಿಗೆ ಕಳುಹಿಸಿಕೊಟ್ಟಿದ್ದೆವು. ಪಾನಿಪುರಿ ಸಾಸ್ ಅಥವಾ ಪಾನಿಗಳನ್ನು ನಾವು ಟೆಸ್ಟ್ ಮಾಡಿಸಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಮಾದರಿಗಳು ಹೆಚ್ಚಾಗಿ ಅಪಾಯಕಾರಿ ಅಂತ ಕಂಡುಬಂದಿವೆ. ಜನರನ್ನು ಭಯಭೀತರಾಗಿ ಮಾಡುವ ಉದ್ದೇಶ ನಮಗಿಲ್ಲ. ಈ ರೀತಿಯ ಸ್ಟ್ರೀಟ್ ಫುಡ್‌ಗಳು ನಿಧಾನವಾಗಿ ದೇಹಕ್ಕೆ ಅಪಾಯ ತಂದೊಡ್ಡುತ್ತವೆ. ಕ್ಯಾನ್ಸರ್ ಸೇರಿ ಡೇಂಜರ್ ರೋಗಗಳನ್ನು ತರುತ್ತವೆ. ಹೀಗಾಗಿ ಜನರೂ ಸಹ ಈ ಬಗ್ಗೆ ಯೋಚನೆ ಮಾಡಿ ಹೊರಗಿನ ಆಹಾರ ಸೇವನೆ ಮಾಡಬೇಕು ಎಂದು ಹೇಳಿದ್ದಾರೆ.