ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಥಾಣೆಯಲ್ಲಿ 4 ಅಂತಸ್ತಿನ ಕಟ್ಟಡದ ಚಾವಣಿ ಕುಸಿದುಬಿದ್ದು 2 ವರ್ಷದ ಮಗು ಸೇರಿ 6 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಕಲ್ಯಾಣ್ ಪೂರ್ವದ ಮಂಗಳರಾಘೊ ನಗರ ಪ್ರದೇಶದಲ್ಲಿರುವ ಸಪ್ತಶೃಂಗಿ ಕಟ್ಟಡದ ನಾಲ್ಕನೇ ಮಹಡಿಯ ಸ್ಲ್ಯಾಬ್ ಕುಸಿದು ಬಿದ್ದಿದೆ. ಮೃತರಲ್ಲಿ ನಾಲ್ವರು ಮಹಿಳೆಯರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
4ನೇ ಮಹಡಿಯ ಸ್ಲ್ಯಾಬ್ ಕುಸಿದಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿವರಿಸಿದರು. ಮೃತರನ್ನು ನಮಸ್ವಿ ಶ್ರೀಕಾಂತ್ ಶೇಲಾರ್ (2), ಪ್ರಮೀಳಾ ಕಲ್ಚರಣ್ ಸಾಹು (56), ಸುನೀತಾ ನೀಲಾಂಚಲ್ ಸಾಹು (38), ಸುಶೀಲಾ ನಾರಾಯಣ ಗುಜಾರ್ (78), ವೆಂಕಟ್ ಭೀಮಾ ಚವ್ಹಾಣ್ (42) ಮತ್ತು ಸುಜಾತಾ ಮನೋಜ್ ವಾಡಿ (38) ಎಂದು ಗುರುತಿಸಲಾಗಿದೆ.