SHOCKING | ಕುಸಿದ ವಾಣಿಜ್ಯ ಕಟ್ಟಡ: ಅವಶೇಷದಡಿ ಸಿಲುಕಿದ್ದ ಏಳು ಮಂದಿಯ ರಕ್ಷಣೆ

ಹೊಸದಿಗಂತ ವರದಿ, ಮಡಿಕೇರಿ:

ಗೋಣಿಕೊಪ್ಪ ಪಟ್ಟಣದಲ್ಲಿ ಕಟ್ಟಡವೊಂದು ದಿಢೀರ್ ಕುಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು,ಕಟ್ಟಡದೊಳಗೆ ಸಿಲುಕಿದ್ದ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅಂಬೂರ್ ಬಿರಿಯಾನಿ ಮಳಿಗೆ ಇದ್ದ ಕಟ್ಟಡ ಗುರುವಾರ ಮಧ್ಯಾಹ್ನ ದಿಢೀರನೇ ಕುಸಿದಿದೆ.
ಈ ಸಂದರ್ಭ ಹೊಟೇಲ್’ನ ಕಾರ್ಮಿಕರು, ಊಟಕ್ಕೆ ತೆರಳಿದ ಗ್ರಾಹಕರು ಸೇರಿದಂತೆ ಏಳು ಮಂದಿ ಅವಶೇಷದಡಿ ಸಿಲುಕಿದ್ದು, ಸ್ಥಳೀಯರು, ಅಗ್ನಿಶಾಮಕದಳ, ಪೊಲೀಸರು ಹಾಗೂ ಎನ್.ಡಿ.ಆರ್.ಎಫ್.ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ.

ಘಟನೆಯಲ್ಲಿ ಒಟ್ಟು ಮೂರು ಮಂದಿ ಗಾಯಗೊಂಡಿದ್ದು,‌ ಈ ಪೈಕಿ ಗಂಭೀರವಾಗಿ ಗಾಯಗೊಂಡ ಓರ್ವನನ್ನು ಮೈಸೂರಿನ ಆಸ್ಪತ್ರೆಗೆ ‌ಸಾಗಿಸಲಾಗಿದೆ.

ಪಟ್ಟಣದ ಮುಖ್ಯರಸ್ತೆಯಲ್ಲಿದ್ದ ಈ ಕಟ್ಟಡ ಸುಮಾರು 80ವರ್ಷಗಳಷ್ಟು ಹಳೆಯದೆನ್ನಲಾಗಿದ್ದು, ಪಟ್ಟಣದಲ್ಲಿ ಇಂತಹ ಇನ್ನೂ ಹಲವು ಕಟ್ಟಡಗಳಿರುವುದಾಗಿ ಕಟ್ಟಡ ಕುಸಿಯುತ್ತಿರುವ ದೃಶ್ಯ ಎದುರುಗಡೆ ಮಳಿಗೆಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದ ಮುಖ್ಯಂತ್ರಿಯವರ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ‌ಶಾಸಕ‌ ಎ.ಎಸ್.ಪೊನ್ನಣ್ಣ ಅವರು ಕೂಡಲೇ ಎನ್.ಡಿ.ಆರ್.ಎಫ್ ತಂಡವನ್ನು ಕಳುಹಿಸಿ ಕಟ್ಟಡದೊಳಗೆ ಸಿಲುಕಿದವರ ರಕ್ಷಣೆಗೆ ಮುಂದಾಗುವಂತೆ ಸೂಚಿಸಿದರು.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಭೇಟಿ ನೀಡಿ ಎನ್.ಡಿ.ಆರ್ ಎಫ್ ತಂಡಕ್ಕೆ ಮಾರ್ಗದರ್ಶನ ನೀಡಿದರು. ಜಿಲ್ಲಾಧಿಕಾರಿ ವೆಂಕಟ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ವರ್ಣಿತ್ ನೇಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!