ಹೊಸದಿಂಗತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಹೆಬ್ರಿ ಬಳಿಯಲ್ಲಿ ಭೀಕರ ಕಾರು ಅಪಘಾತದಲ್ಲಿ ಉಡುಪಿ ಮೂಲದ ಇಬ್ಬರು ಶಿಕ್ಷಕರು ಮೃತಪಟ್ಟಿದ್ದು, ಕಾರಿನಲ್ಲಿದ್ದ ಇನ್ನೋರ್ವ ಶಿಕ್ಷಕರು ಗಂಭೀರ ಗಾಯಗೊಂಡಿರುವ ಘಟನೆ ನಡೆಯಿದೆ.
ಇಲ್ಲಿನ ಸೀತಾನದಿ ಜಕ್ಕನಮಕ್ಕಿ ಬಳಿಉಡುಪಿಯಿಂದ ಆಗುಂಬೆ ಹೋಗುತ್ತಿರುವ ಬಸ್ ಹಾಗೂ ಚೆನ್ನಗಿರಿಯಲ್ಲಿ ಮದುವೆ ಮುಗಿಸಿ ಉಡುಪಿಗೆ ಬರುತ್ತಿರುವ ಶಿಕ್ಷಕರ ಕಾರಿನ ನಡುವೆ ಅಪಘಾತ ನಡೆದಿದೆ.
ಉಡುಪಿ ಡಿಡಿಪಿಐ ಆಫೀಸ್ ನ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ಬಣ್ಣ ಗಾಣಿಗ ಹಾಗೂ ಉಡುಪಿ ಇಂದಿರಾ ನಗರ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಸೋಮ ಶೇಖರ ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡ ಶಿಕ್ಷಕ ಸುದರ್ಶನ ಹಾಗೂ ಕಾರು ಚಲಾಯಿಸುತ್ತಿದ್ದ ಸತೀಶ್ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದ ತೀವ್ರತೆಯಿಂದ ಬಸ್ ನ ಒಳಗೆ ಸಿಲುಕಿದ್ದ ಕಾರನ್ನು ಹೊರತರಲು ಹರಸಾಹಸ ಪಡಬೇಕಾಯಿತು. ಅಂಬುಲೆನ್ಸ್ ಸಿಗದೆ ಯಾರು ಸಹಾಯಕ್ಕೆ ಬಾರದೆ ಇರುವುದನ್ನು ಗಮನಿಸಿ ಈ ಮಾರ್ಗದಲ್ಲಿ ಹೋಗುತ್ತಿದ್ದ ಪ್ರಮೋದ್ ಎಂಬವರು ನಾಲ್ವರನ್ನು ತನ್ನ ಕಾರಿಗೆ ಹಾಕಿಕೊಂಡು ಬಂದು ಹೆಬ್ರಿ ಸರಕಾರಿ ಆಸ್ಪತ್ರೆ ಸೇರಿಸಿದರು. ತುರ್ತು ಚಿಕಿತ್ಸೆ ಸಿಗದೆ ಇಬ್ಬರು ಮೃತಪಟ್ಟಿದ್ದಾರೆ.