Friday, September 12, 2025

SHOCKING | ಹಾಸನದಲ್ಲಿ ಭೀಕರ ದುರಂತ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ಹರಿದು ಏಳು ಜನರು ಸಾವು

ಹೊಸ ದಿಗಂತ ವರದಿ, ಹಾಸನ :

ಗಣಪತಿ ವಿಸರ್ಜನೆ ಮೆರವಣಿಗೆಯ ಮೇಲೆ ಲಾರಿ ಹರಿದು ಏಳು ಜನರು ಸ್ಥಳದಲ್ಲೇ ಮೃತಪಟ್ಟಿರುವ ದುರಂತ ಘಟನೆ ಜಿಲ್ಲೆಯ ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಗಣೇಶ ಚತುರ್ಥಿಯ ಅಂತಿಮ ದಿನವಾದ ಶುಕ್ರವಾರ ಮೊಸಳೆ ಹೊಸಹಳ್ಳಿಯಲ್ಲಿ ಭಕ್ತರೊಂದಿಗೆ ಗಣಪತಿ ಮೂರ್ತಿಯ ವಿಸರ್ಜನೆ ಮೆರವಣಿಗೆ ನಡೆಯುತ್ತಿತ್ತು. ಹೊಸಹಳ್ಳಿ-ಮೊಸಳೆ ರಸ್ತೆಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಭಕ್ತರು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಈ ಸಮಯದಲ್ಲಿ ಅರಕಲಗೂಡ ಮಾರ್ಗದಿಂದ ಬರುತ್ತಿದ್ದ ಭಾರೀ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಮೆರವಣಿಗೆಯ ಜನಸಮೂಹದ ಮೇಲೆ ಹರಿದಿದ್ದು, ಭಯಾನಕ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲೇ 7 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಹದಿನೈದು ಜನರು ಗಂಭೀರ ಗಾಯಗೊಂಡಿದ್ದಾರೆ. ಇನ್ನು ಐದು ಮಂದಿಯ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ಹರಡಿದ್ದು, ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗುಲಿಮುಟ್ಟಿದೆ. ಸ್ಥಳಕ್ಕೆ ಪೋಲಿಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಗಾಯಾಳುಗಳನ್ನು ವಿಚಾರಿಸಲು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್,ಡಿ ರೇವಣ್ಣ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಭೇಟಿಕೊಡಲಿದ್ದಾರೆ.

ಇದನ್ನೂ ಓದಿ