ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಪುಂಡರು ಕಾಮದಿಂದ ಕಣ್ಣು ಮುಚ್ಚುತ್ತಿದ್ದಾರೆ. ಒಂಟಿ ಮಹಿಳೆ ಕಂಡರೆ ಸಾಕು ಅವರ ಮೇಲೆರಗಿ ಜೀವನವನ್ನೇ ಕತ್ತಲೆ ಕೋಣೆಗೆ ನೂಕುತ್ತಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಕರಾಚಿಯಲ್ಲಿ ಅತ್ಯಂತ ಭಯಾನಕ ಘಟನೆ ನಡೆದಿದೆ. ಹಾಡಹಗಲೇ, ನಡುರಸ್ತೆಯಲ್ಲಿ ಯುವತಿ ಮೇಲೆ ಅತ್ಯಾಚಾರ ಯತ್ನ ನಡೆದಿರುವುದು ಸಂಚಲನ ಮೂಡಿಸಿದೆ.
ಕರಾಚಿಯ ಗುಲಿಸ್ತಾನ್‌ನ ಜೌಹರ್ ಪ್ರದೇಶದಲ್ಲಿ ಜುಲೈ 3 ರಂದು ಆಘಾತಕಾರಿ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಒಬ್ಬ ವ್ಯಕ್ತಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿದ್ದಾನೆ. ಅದೇ ವೇಳೆ ಯುವತಿಯೊಬ್ಬಳು ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದನ್ನು ಗಮನಿಸಿ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಆಕೆ ಜೋರಾಗಿ ಕಿರುಚಿದ್ದರಿಂದ ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.