Saturday, January 24, 2026
Saturday, January 24, 2026
spot_img

ಕರಾವಳಿಯಲ್ಲಿ ಶಾಕಿಂಗ್ ಘಟನೆ: ತಂದೆಗೆ ಇರಿದು ಕೋವಿಯಿಂದ ಗುಂಡು ಹಾರಿಸಿಕೊಂಡ ಪುತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಂದೆಯೊಂದಿಗೆ ನಡೆದ ಜಗಳದ ಹಿನ್ನೆಲೆಯಲ್ಲಿ ಬಾಲಕನೊಬ್ಬ ತಂದೆಗೆ ಚೂರಿಯಿಂದ ಇರಿದು ಬಳಿಕ ಮನೆಯಲ್ಲಿದ್ದ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಸಂಭವಿಸಿದೆ.

ಮೃತನನ್ನು ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಅವರ ಪುತ್ರ ಮೋಕ್ಷ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಸಂತ ಅಮೀನ್ ಅವರನ್ನು ತಕ್ಷಣ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಸಲಾಗುತ್ತಿದೆ.

ಪೊಲೀಸ್ ಮೂಲಗಳ ಪ್ರಕಾರ, ಶನಿವಾರ ಸಂಜೆ ಯಾವುದೋ ಕಾರಣಕ್ಕೆ ತಂದೆ-ಮಗನ ನಡುವೆ ಜಗಳ ನಡೆದಿದೆ. ಈ ವೇಳೆ ಉದ್ರಿಕ್ತನಾದ ಮೋಕ್ಷ ತಂದೆಗೆ ಚೂರಿಯಿಂದ ಇರಿದು ಬಳಿಕ ಮನೆಯಲ್ಲಿದ್ದ ಕೋವಿಯನ್ನು ಬಳಸಿ ಶೂಟ್ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕೇರಳ ಮೂಲದವರಾಗಿರುವ ವಸಂತ ಅಮೀನ್‌ ಅವರು ರಾಮಕುಂಜ ಪಾದೆ ಪ್ರದೇಶದಲ್ಲಿ ಜಾಗ ಖರೀದಿಸಿ ಮನೆ ನಿರ್ಮಿಸಿಕೊಂಡು ಪುತ್ರನೊಂದಿಗೆ ವಾಸವಿದ್ದರು. ಮೃತ ಮೋಕ್ಷ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದನೆಂದು ತಿಳಿದು ಬಂದಿದೆ. ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Must Read