ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ತಾಲ್ಲೂಕಿನ ಕಟ್ಟಿನಮನೆ ಗ್ರಾಮದಲ್ಲಿ ಮಂಗನ ಕಾಯಿಲೆ (KFD) ಪ್ರಕರಣ ದೃಢಪಟ್ಟಿದ್ದು, ಗ್ರಾಮದಲ್ಲಿ ಆತಂಕ ಮೂಡಿಸಿದೆ. ಈ ಮೂಲಕ ಎರಡು ಮಂದಿ ಸೋಂಕಿತರು ಪತ್ತೆಯಾಗಿದ್ದು, ಸ್ಥಳೀಯ ಆರೋಗ್ಯ ಇಲಾಖೆಯು ತುರ್ತು ಕ್ರಮಗಳನ್ನು ಕೈಗೊಂಡಿದೆ.
ಗ್ರಾಮದ 30 ವರ್ಷದ ಯುವಕನಿಗೆ ಮಂಗನ ಕಾಯಿಲೆ ದೃಢಪಟ್ಟಿದ್ದು, ಅವನನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬ ಸೋಂಕಿತನು ಬೇರೆ ಆರೋಗ್ಯ ಸಮಸ್ಯೆಯಿಂದ ಮಣಿಪಾಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ: FOOD | ಮಂಗಳೂರು ಸ್ಟೈಲ್ ಹುರುಳಿ ಚಟ್ನಿ: ಸಾಂಪ್ರದಾಯಿಕ ರುಚಿಯ ಸ್ಪೆಷಲ್ ಸೈಡ್ ಡಿಶ್!
ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರಿಗೆ ಶುಚಿತ್ವವನ್ನು ಕಾಪಾಡುವ ಬಗ್ಗೆ ಸಲಹೆ ನೀಡಿದರು. ಸೋಂಕಿನ ಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಅವರ ಸೂಚನೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಒಂದೇ ಕುಟುಂಬದ 6 ಮಂದಿ ಮಂಗನ ಕಾಯಿಲೆಗೆ ಒಳಗಾದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕಟ್ಟಿನಮನೆ ಗ್ರಾಮದಲ್ಲಿ ಪ್ರಕರಣಗಳು ಹೆಚ್ಚಾಗದಂತೆ ಸ್ಥಳೀಯ ಆರೋಗ್ಯ ಅಧಿಕಾರಿಗಳು ಸೋಂಕಿನ ವ್ಯಾಪ್ತಿಯನ್ನು ತಡೆಗಟ್ಟಲು ತುರ್ತು ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ನಿಯಮಿತ ತಪಾಸಣೆಯನ್ನು ಜಾರಿಗೆ ತಂದಿದ್ದಾರೆ.

