ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುನೀತ್ ರಾಜ್ಕುಮಾರ್ ಅವರೊಂದಿಗೆ ‘ಹುಡುಗರು’ ಚಿತ್ರದಲ್ಲಿ ‘ಪಂಕಜಾ’ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ಅವರು 42ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣವು ಚಿತ್ರ ರಂಗದಲ್ಲಿ ಆಘಾತ ಹಾಗೂ ದುಃಖವನ್ನುಂಟು ಮಾಡಿದೆ.
42 ವರ್ಷದ ಶೆಫಾಲಿ ಮುಂಬೈನ ಅಂಧೇರಿ ಲೋಖಂಡ್ವಾಲಾದಲ್ಲಿ ವಾಸಿಸುತ್ತಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಶೆಫಾಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲಾಗಲೇ ಶೆಫಾಲಿ ಕೊನೆಯುಸಿರೆಳೆದಿದ್ದರು. ಸದ್ಯ ಶೆಫಾಲಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ.
1982ರ ಡಿಸೆಂಬರ್ 15ರಂದು ಜನಿಸಿದ ಶೆಫಾಲಿ ಮುಂಬೈನಲ್ಲಿ ಬೆಳೆದರು. 2004ರಲ್ಲಿ ಹರ್ಮೀತ್ ಸಿಂಗ್ ಜೊತೆ ಶೆಫಾಲಿ ವಿವಾಹವಾದರು. ಆ ಬಳಿಕ ಪತಿಯೊಂದಿಗೆ ವಿಚ್ಛೇದನ ಪಡೆದು 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ‘ಕಾಂತಾ ಲಗಾ’ ಹಾಡಿನ ಮೂಲಕ ನಟಿ ಫೇಮಸ್ ಆಗಿದ್ದರು.