ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕಣ್ಣೂರು ಜಿಲ್ಲೆಯ ತಲಸ್ಸೇರಿ ಬಳಿಯ ಜಮೀನಿನಲ್ಲಿ ಬಾಂಬ್ ಸ್ಫೋಟಗೊಂಡು 86 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಕುಡಕ್ಕಲಮ್ ಗ್ರಾಮದ ಆಯಿನಾತ್ ವೇಲಾಯುಧನ್ ಅವರು ಮೃತರು.
ಆಯಿನಾತ್ ವೇಲಾಯುಧನ್ ಅವರು ಜಮೀನಿನಲ್ಲಿ ತೆಂಗಿನಕಾಯಿ ಸಂಗ್ರಹಿಸಲು ಹೋದಾಗ, ಬಾಂಬ್ ಇದ್ದ ಪೊಟ್ಟಣ ಕಂಡಿದೆ. ಅದನ್ನು ಅವರು ಎತ್ತಿಕೊಂಡು, ತೆಗೆದು ನೋಡಿದಾಗ ಅದು ಸ್ಫೋಟಗೊಂಡಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಇದು ಸ್ಟೀಲ್ ಬಾಂಬ್ ಎಂದು ಕಂಡುಬಂದಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಬಾಂಬ್ ಸ್ಫೋಟದ ಕುರಿತು ತನಿಖೆ ಆರಂಭಿಸಲಾಗಿದೆ. ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಬುಧವಾರ ನಡೆಸಲಾಗುತ್ತದೆ. ಮರಣೋತ್ತರ ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿ ದೊರೆಯಲಿದೆ ಎಂಬುದಾಗಿ ತಲಸ್ಸೇರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಇದುವರೆಗೆ ಜಮೀನಿನಲ್ಲಿ ಬಾಂಬ್ ಹೇಗೆ ಬಂತು? ಅದನ್ನು ಎಲ್ಲಿ ತಯಾರಿಸಲಾಗಿತ್ತು? ಅದನ್ನೇಕೆ ಜಮೀನಿನಲ್ಲಿ ಬಿಸಾಡಲಾಗಿತ್ತು ಎಂಬುದರ ಮಾಹಿತಿ ಲಭ್ಯವಾಗಿಲ್ಲ.