ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಇನ್ನು ‘ಸಿಂಗಲ್’ ಸಿಗರೇಟ್ ಮಾರಾಟ ನಿಷೇಧವಾಗಲಿದೆಯಾ? ಹೌದು, ಹೀಗೊಂದು ಮುನ್ಸೂಚನೆ ಸರ್ಕಾರಿ ವಲಯದಿಂದ ಹೊರಬಿದ್ದಿದೆ.
ತಂಬಾಕು ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಚಿಲ್ಲರೆಯಾಗಿ ಸಿಗರೇಟ್ ಮಾರಾಟಕ್ಕೆ ನಿಷೇಧ ಹೇರಲು ಸಂಸತ್ತಿನ ಸ್ಥಾಯಿ ಸಮಿತಿ ಸರ್ಕಾರಕ್ಕೆಸಲಹೆ ನೀಡಿದೆ. ಈ ಮೂಲಕ ತಂಬಾಕು ಬಳಕೆಗೆ ಕಡಿವಾಣ ಹಾಕಬಹುದು ಎಂದು ತಿಳಿಸಿದೆ. ಇದೇ ವೇಳೆ ಸಿಗರೇಟ್ ನ ಚಿಲ್ಲರೆ ಮಾರಾಟವು ತಂಬಾಕು ಬಳಕೆಯ ವಿರುದ್ಧದ ಹೋರಾಟಕ್ಕೆ ಬಲ ತುಂಬಲಿದೆ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.
ಇನ್ನು ವಿಮಾನ ನಿಲ್ದಾಣದಲ್ಲಿರುವ ಧೂಮಪಾನ ವಲಯವನ್ನು ಮುಚ್ಚುವಂತೆಯೂ ಸಮಿತಿ ಶಿಫಾರಸು ಮಾಡಿದೆ.
ದೇಶದಲ್ಲಿ ಈಗಾಗಲೇ ಬೀಡಿಗಳ ಮೇಲೆ 22%, ಸಿಗರೇಟ್ಗಳ ಮೇಲೆ 53% ಮತ್ತು ಹೊಗೆ ರಹಿತ ತಂಬಾಕಿನ ಮೇಲೆ 64% ಜಿಎಸ್ಟಿ ವಿಧಿಸಲಾಗುತ್ತಿದೆ. ಈ ತೆರಿಗೆ ಗಣನೀಯ ಏರಿಕೆ ಅಲ್ಲ ಎಂದು ಸ್ಥಾಯಿ ಸಮಿತಿ ಗಮನಿಸಿದೆ. ಅಲ್ಲದೆ ತಂಬಾಕು ಸೇವನೆಯಿಂದ ಕ್ಯಾನ್ಸರ್ ಸಾಧ್ಯತೆ ಹೆಚ್ಚುತ್ತದೆ ಎಂದು ಸಮಿತಿ ಮತ್ತೆ ಒತ್ತಿ ಹೇಳಿದೆ.
ದೇಶದಲ್ಲಿ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಸರ್ಕಾರ ನಿಷೇಧಿಸಿದೆ.
ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 3.5 ಲಕ್ಷ ಜನರು ಸಿಗರೇಟ್ ಸೇವನೆಯ ಪರಿಣಾಮದಿಂದ ಸಾಯುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇನ್ನಷ್ಟು ದಿಟ್ಟ ಹೆಜ್ಜೆ ಮುಂದಿಡುವ ಸಾಧ್ಯತೆಯಿದೆ.